

ಬೆಂಗಳೂರು: ತುಮಕೂರಿನಲ್ಲಿ ಮೆಗಾಫುಡ್ ಪಾರ್ಕ್ ಲೋಕಾರ್ಪಣೆಯಾಗಿದ್ದು, ಇದು ದೇಶದ ಮೊದಲ ಫುಡ್ ಪಾರ್ಕ್ ಎಂಬ ಖ್ಯಾತಿಗಳಿಸಿದೆ. ಈ ಬೃಹತ್ ಯೋಜನೆಯ ಮತ್ತು ಫುಡ್ ಪಾರ್ಕ್ ನ ಕೆಲ ಪ್ರಮುಖ ಅಂಶಗಳು ಇಲ್ಲಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ತುಮಕೂರಿನಲ್ಲಿ ಮೆಗಾಫುಡ್ ಪಾರ್ಕ್ ನಿರ್ಮಾಣವಾಗಿದ್ದು, ಇದಕ್ಕಾಗಿ ಸುಮಾರು 250 ಕೋಟಿ ರು.ಗಳ ಆರಂಭಿಕ ಬಂಡವಾಳ ತೊಡಗಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಂಡವಾಳ ಪ್ರಮಾಣವನ್ನು 1 ಸಾವಿರ ಕೋಟಿಗೆ ಏರಿಕೆ ಮಾಡುವ ನಿರೀಕ್ಷೆ ಇದೆ. ಫುಡ್ಪಾರ್ಕ್ನಿಂದಾಗಿ ರಾಜ್ಯದಲ್ಲಿ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಫುಡ್ಪಾರ್ಕ್ ಘಟಕದಲ್ಲಿಯೇ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಿದೆ.
ಸುಮಾರು 110 ಎಕರೆ ಜಾಗದಲ್ಲಿ ಈ ಮೆಗಾ ಫುಡ್ಪಾರ್ಕ್ ಅನ್ನು ನಿರ್ಮಿಸಲಾಗಿದ್ದು, ಒಂದೇ ಸೂರಿನಡಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಜ್ಯದ ವಿವಿಧೆಡೆ ರೈತರು ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಇಲ್ಲಿ ಸಂಸ್ಕರಿಸಿ ವಿವಿಧ ಆಹಾರೋತ್ಪನ್ನಗಳಾಗಿ ಬದಲಾಯಿಸಿ ಮಾರುಕಟ್ಟೆಗೆ ರವಾನೆ ಮಾಡಲಾಗುತ್ತದೆ. ಸಂಸ್ಕರಣಾ ಘಟಕಕ್ಕೆ ರೈತರು ತರಕಾರಿ ಮತ್ತು ಹಣ್ಣುಗಳನ್ನು ತಂದ ನಂತರದ ಕೇವಲ ಐದು ಗಂಟೆಗಳಲ್ಲಿಯೇ ಅವಗಳನ್ನು ಆಹಾರ ಉತ್ಪನ್ನಗಳಾಗಿ ಬದಲಾಯಿ ರವಾನೆ ಮಾಡಲಾಗುತ್ತದೆ. ಇದು ಘಟಕದ ಮತ್ತೊಂದು ವಿಶೇಷತೆ.
ಅಲ್ಲದೆ ಈ ಘಟಕ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಒಂದೊಂದು ಬೆಳೆಗೂ ಒಂದೊಂದು ಘಟಕವೆಂದು ವಿಭಾಗಿಸಲಾಗಿದೆ. ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ 50 ಕೋಟಿ ಧನ ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ರಾಜ್ಯದ 12 ಜಿಲ್ಲೆಗಳು ಇದರ ಪ್ರಯೋಜನ ಪಡೆಯಲಿದ್ದು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಲೂರು, ಚಾಮರಾಜನಗರ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಸಂಗ್ರಹ ಘಟಗಳನ್ನು ಆರಂಭಿಸಲಾಗಿದೆ. ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಸಂಸ್ಕರಣಾ ಘಟಕಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. ಪ್ರಸಕ್ತ ಘಟಕವು ಸುಮಾರು 200 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.
ತುಮಕೂರು ಮಾದರಿಯಲ್ಲಿಯೇ ದೇಶದಲ್ಲಿ ಇಂತಹ 30 ಫುಡ್ಪಾರ್ಕ್ಗಳ ತಲೆಎತ್ತಲ್ಲಿದ್ದು, ಮೊದಲ ಹಂತದಲ್ಲಿ 10 ಫುಡ್ ಪಾರ್ಕ್ಗಳಿಗೆ ಅನುಮೋದನೆ ನೀಡಲಾಗಿದೆ.
ತುಮಕೂರಿಗೆ ಮಾತ್ರ ಸೀಮಿತವಲ್ಲ:
ತುಮಕೂರಿನಲ್ಲಿ ನಿರ್ಮಾಣವಾಗಿರುವ ಈ ಪಾರ್ಕ್ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ 12 ಜಿಲ್ಲೆಗಳಿಗೆ ಇದು ಸಹಾಯಕವಾಗಲಿದೆ. ಬಹುಬೇಗ ಹಾಳಾಗುವ ಹಣ್ಣು, ತರಕಾರಿಗಳನ್ನು ಸಂಸ್ಕರಣೆ ಮಾಡುವುದು ಮತ್ತು ಅವುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವುದು ಪಾರ್ಕ್ ನಿರ್ಮಾಣದ ಪ್ರಮುಖ ಉದ್ದೇಶವಾಗಿದೆ. ರೈತರಿಗೆ ಅಗತ್ಯ ತಾಂತ್ರಿಕ ತರಬೇತಿ ನೀಡುವುದು, ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಪಾರ್ಕ್ ಮಾಡಲಿದೆ.
ರೈತರಿಂದಲೇ ಹಣ್ಣು, ತರಕಾರಿ ಖರೀದಿ :
ಈ ಫುಡ್ಪಾರ್ಕ್ಗಾಗಿ ರಾಜ್ಯದ 12 ಜಿಲ್ಲೆಗಳ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಅಲ್ಲಿ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಜಿಲ್ಲೆಗಳಿಂದ ಈ ಘಟಕಕ್ಕೆ ಹಣ್ಣು ಮತ್ತು ತರಕಾರಿಗಳು ಐದು ಗಂಟೆಯ ಅವಧಿಯೊಳಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಪ್ಯೂಚರ್ ಗ್ರೂಪ್ ಎಸ್ಪಿವಿ :
ದೇಶದ ಖ್ಯಾತ ಉದ್ಯಮವಾದ ಪ್ಯೂಚರ್ ಗ್ರೂಪ್ನ ಘಟಕವಿದಾಗಿದ್ದು, ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ದೇಶಾದ್ಯಂತವಿರುವ ಬಿಗ್ ಬಜಾರ್, ಫುಡ್ ಬಜಾರ್ ಮುಂತಾದವುಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ಫುಡ್ ಪಾರ್ಕ್ಗೆ ಕೋಲಾರದಿಂದ ಪ್ರತಿದಿನ 6 ಮೆಗಾವ್ಯಾಟ್ ವಿದ್ಯುತ್ ತಡೆ ರಹಿತವಾಗಿ ಪೂರೈಕೆಯಾಗುತ್ತದೆ.
ಸಂಗ್ರಹ :
ಈ ಫುಡ್ಪಾರ್ಕ್ಗಾಗಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಹಣ್ಣು ಮತ್ತು ತಕರಾರಿಗಳನ್ನು ಸಂರಕ್ಷಿಸಿ ಇಡಬಹುದಾದ ಬೃಹತ್ ಫ್ರೀಜರ್ ಈ ಘಟಕದಲ್ಲಿದ್ದು, ಸುಮಾರು 250 ಟನ್ ಗಳಷ್ಟು ಹಣ್ಣು ಮತ್ತು ತರಕಾರಿ ಸಂರಕ್ಷಿಸಬಹುದು.
ರೆಡಿ ಟು ಈಟ್ ಫುಡ್ ತಯಾರಿ :
ವಸಂತನರಸಾಪುರದ ಈ ಘಟಕದಲ್ಲಿ ರೆಡಿ ಟು ಈಟ್ ಆಹಾರಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ 6-7ಟನ್ ಸಮೋಸ, ಚಪಾತಿ, ಗಿಣ್ಣು ಇಲ್ಲಿ ತಯಾರಾಗಲಿದೆ. ದಿನದ 24 ಗಂಟೆಯೂ ಈ ಘಟಕ ಕಾರ್ಯನಿರ್ವಹಿಸಲಿದೆ. ಹಣ್ಣು ಮತ್ತು ತರಕಾರಿಯನ್ನು ಫ್ಯಾಕ್ಟರಿಯ ಹೊರಭಾಗದಲ್ಲಿ ತುಂಬಿದರೆ ಸಾಕು, ಅದು ತೊಳೆದು ಉತ್ತಮ ಹಣ್ಣು ಬೇರ್ಪಟ್ಟು ಒಂದು ಕಡೆ ಸಂಗ್ರಹವಾಗುತ್ತದೆ. ತರಕಾರಿಗಳನ್ನು ಕತ್ತರಿಸಲು ಸಹ ಅತ್ಯಾಧುನಿಕ ಉಪಕರಣಗಳನ್ನು ಇಲ್ಲಿ ಬಳಸಲಾಗುತ್ತದೆ.
ಪಲ್ಪಿಂಗ್ ಘಟಕ :
ಮಾವು, ಬಾಳೆ, ಟೊಮೆಟೋ, ತೊಂಡೆಕಾಯಿಯಿಂದ ಪಲ್ಪ್ ತಿರುಳು ತೆಗೆಯುವುದು ಈ ಫುಡ್ಪಾರ್ಕ್ ಪ್ರಮುಖ ಆಕರ್ಷಣೆಯಾಗಿದೆ. ಒಂದು ಗಂಟೆಗೆ 10 ಟನ್ ಮಾವಿನ ಹಣ್ಣು, 6 ಟನ್ ಪಪ್ಪಾಯಿ, 6 ಟನ್ ಟೊಮೆಟೋ, 6 ಟನ್ ಬಾಳೆಹಣ್ಣಿನ ರಸ ತೆಗೆಯಬಹುದಾದ ವ್ಯವಸ್ಥೆ ಇಲ್ಲಿದೆ. ಮಾವಿನ ಕಾಯಿಯನ್ನು ಹಣ್ಣು ಮಾಡುವ ಘಟಕಗಳು ಇಲ್ಲಿದ್ದು, ಒಂದೊಂದು ಛೇಂಬರ್ನಲ್ಲಿ 50 ಟನ್ ಸಂಗ್ರಹ ಮಾಡಬಹುದಾಗಿದೆ. ಒಟ್ಟು 300 ಟನ್ ಸಂಗ್ರಹಣೆ ಮಾಡಬಹುದಾಗಿದೆ.