

ಬೆಂಗಳೂರು: ರಾಜ್ಯದಲ್ಲಿ ಮೂರು ತಿಂಗಳ ಅವಧಿಯಲ್ಲಿ 211 ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಅವರೆಲ್ಲಾ ರೈತರೇ ಆಗಿದ್ದಾರೆ. ಅಷ್ಟೇ ಅಲ್ಲ, ಅಸುನೀಗಿದವರಲ್ಲಿ ಮಧ್ಯ
ವಯಸ್ಕರೇ ಹೆಚ್ಚು.`ಇದು ರಾಜ್ಯ ಸರ್ಕಾರ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಖಚಿತ ಮಾಹಿತಿ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸರ್ಕಾರ ಅಗತ್ಯ ಮಾಹಿತಿ ಸಂಗ್ರಹಿಸಿದೆ. ಸರ್ಕಾರಕ್ಕೆ ಮಾಹಿತಿ ನೀಡಿದ
ಜಿಲ್ಲಾಧಿಕಾರಿಗಳಿಂದಲೇ ಕಾಂಗ್ರೆಸ್ ಕೂಡ ಮಾಹಿತಿ ಪಡೆದಿದ್ದು, ಸರ್ಕಾರ ಮತ್ತು ಪಕ್ಷದ ಮಾಹಿತಿ ಕೂಡ ಒಂದೇ ಆಗಿದೆ. ಆದ್ದರಿಂದ ಆತ್ಮಹತ್ಯೆಗಳು ಹೆಚ್ಚಾಗಿರುವುದು ಸತ್ಯ. ಇದನ್ನು ತಡೆಯಲು ಮತ್ತು ನೊಂದವರಿಗೆ ಸ್ಪಂದಿಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ ಏಪ್ರಿಲ್‍ನಲ್ಲಿ 7 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮೇನಲ್ಲಿ 12, ಜೂನ್‍ನಲ್ಲಿ 20, ಜುಲೈನಲ್ಲಿ 164 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 37 ರೈತರು ಕಬ್ಬು ಬೆಳೆಗಾರರಾಗಿದ್ದು, 17 ರೈತರು ಭತ್ತ, 15 ಮಂದಿ ಹತ್ತಿ ಹಾಗೂ 18 ರೈತರು ಮುಸುಕಿನ ಜೋಳ ಬೆಳೆದ ವರು. ಆದರೆ, 43 ಮಂದಿ ಯಾವುದೇ ಬೆಳೆ ಬೆಳೆಯದವರು. ಸಾವಿಗೆ ಶರಣಾದ ವರಲ್ಲಿ 20ರಿಂದ 40ರ ಹರೆಯದವರು ಸುಮಾರು
100ಕ್ಕೂ ಹೆಚ್ಚು. 40ರ ವಯಸ್ಸಿನ ನಂತರದವರು 70ಕ್ಕೂ ಅಧಿಕ ಮಂದಿ ಇದ್ದಾರೆ.
ಹೀಗೆ ಆತ್ಮಹತ್ಯೆ ಮಾಡಿ ಕೊಂಡಿರುವ ಎಲ್ಲರೂ ರೈತ ಕುಟುಂಬದವರೇ. ಇವರು ಸಾಲ ಮತ್ತು ಇತರೆ ವೈಯಕ್ತಿಕ ಕಾರಣಗಳಿಂದ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ವಾಸ್ತವ ಕಾರಣ ಗಳೇನು ಎಂದು ಸರ್ಕಾರ ಕೂಡ ತನಿಖೆ ನಡೆಸುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕೈಗೊಂಡಿರುವ ಅಗತ್ಯ ಕ್ರಮದ ಬಗ್ಗೆ ಮುಖಂಡರ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆತ್ಮಹತ್ಯೆ ಮುಂದುವರಿಯದಂತೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಮುಖಂಡರು ಸೂಚಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದವರ ನೋವಿಗೆ ಸ್ಪಂದಿಸುವಂತೆಯೂ ಸಲಹೆ ನೀಡಿದ್ದಾರೆ ಎಂದರು.