ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಪ್ರೇಮಿಗಳ ಸಾವು

ಹುಟ್ಟುಹಬ್ಬ ಮುಗಿಸಿಕೊಂಡು ನಂದಿಬೆಟ್ಟದಿಂದ ಹಿಂದಿರುಗುತ್ತಿದ್ದ ಪ್ರೇಮಿಗಳಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಹುಟ್ಟುಹಬ್ಬ ಮುಗಿಸಿಕೊಂಡು ನಂದಿಬೆಟ್ಟದಿಂದ ಹಿಂದಿರುಗುತ್ತಿದ್ದ ಪ್ರೇಮಿಗಳಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಯನಗರದ ಲತಾ (22) ಹಾಗೂ ತಿಲಕನಗರ ನಿವಾಸಿ ಸೈಯದ್ ತಾಹೀರ್ ಅಹಮದ್ (22) ಮೃತಪಟ್ಟ ಪ್ರೇಮಿ ಗಳು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಭಾನುವಾರ ಸೈಯದ್ ಹುಟ್ಟುಹಬ್ಬವಿತ್ತು, ಈ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರೂ ಬೆಳಗ್ಗೆ ನಂದಿ ಬೆಟ್ಟಕ್ಕೆ ಹೋಗಿದ್ದರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಹಿಂತಿರುಗುತ್ತಿದ್ದರು. ಇಬ್ಬರೂ ತಮ್ಮ ಡಿಯೋ ದ್ವಿಚಕ್ರ ವಾಹನದಲ್ಲಿ ವಾಪಸ್ ಬರುತ್ತಿದ್ದ ವೇಳೆ ದುರಂತ ಸಂಭವಿಸಿದೆ.

ಸೈಯದ್ ಗೂಗಲ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ. ಲತಾ ಕಮರ್ಷಿಯಲ್ ಸ್ಟ್ರೀಟ್‍ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರ ಪರಿಚಯ ಸ್ನೇಹ, ನಂತರ ಪ್ರೀತಿಗೆ ತಿರುಗಿತ್ತು. ಭಾನುವಾರ ಸೈಯ್ಯದ್ ಹುಟ್ಟು ಹಬ್ಬವಿದ್ದ ಕಾರಣ ನಂದಿಬೆಟ್ಟದಲ್ಲಿ ಆಚರಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಲತಾ ತನ್ನ ಇಬ್ಬರು ಸಹೋದರಿಯರನ್ನೂ ಸಹ ಹುಟ್ಟು ಹಬ್ಬ ಆಚರಣೆಗೆ ಕರೆದುಕೊಂಡು ಹೋಗಿದ್ದಳು. ನಾಲ್ವರು ಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿ ಅಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಬಳಿಕ ಸೈಯದ್ ಹಾಗೂ ಲತಾ ಒಂದು ವಾಹನದಲ್ಲಿ  ಆಕೆಯ ಸಹೋದರಿಯರು ಮತ್ತೊಂದು ಸ್ಕೂಟರ್‍ನಲ್ಲಿ ವಾಪಸಾಗುತ್ತಿದ್ದರು.

ವಿಮಾನ ನಿಲ್ದಾಣ ರಸ್ತೆಯಲ್ಲಿ ಬರುತ್ತಿದ್ದಾಗ ಸೈಯದ್ ಓಡಿಸುತ್ತಿದ್ದ ವಾಹನ ಆಯತಪ್ಪಿ ರಸ್ತೆ ವಿಭಜಕದ ಮೇಲೆ ಹತ್ತಿ ಪಕ್ಕದ ರಸ್ತೆಗೆ ಇಳಿದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡರು.

ನಂತರ ಸೈಯ್ಯದ್ ಹಾಗೂ ಲತಾಳನ್ನು ಸ್ಥಳೀಯರ ನೆರವಿನಿಂದ ಆಕೆಯ ಸಹೋದರಿಯರು ಆಸ್ಪತ್ರೆಗೆ ಸಾಗಿಸಿದರು. ಸೈಯದ್‍ನನ್ನು ಯಲಹಂಕದ ಅಪೂರ್ವ ಆಸ್ಪತ್ರೆ ಹಾಗೂ ಲತಾಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಬ್ಬರೂ ಮೃತ ಪಟ್ಟಿದ್ದಾರೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.  ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com