

ಕೋಲಾರ/ಚಿಕ್ಕಬಳ್ಳಾಪುರ: ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಕೋಲಾರ ನಗರದ ಹೊರವಲಯದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜು ಮತ್ತು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಲೆಕ್ಕಗಳ ಪರಿಶೀಲನೆ ನಡೆಸಿದೆ. ಆದರೆ, ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಬಗ್ಗೆ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ವೈದ್ಯಕೀಯ ಕಾಲೇಜು ಮತ್ತು ಜಾಲಪ್ಪ ಆಸ್ಪತ್ರೆಯ ಲೆಕ್ಕ ವಿಭಾಗದಲ್ಲಿ ಐಟಿ ಅಧಿಕಾರಿಗಳು ಕೆಲವು ಪ್ರಮುಖ ಕಡತಗಳನ್ನು ಪರಿಶೀಲಿಸಿ, ಅಲ್ಲಿನ ಲೆಕ್ಕಾಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಣೆ ಮಾಡಿ ವಾಪಸ್ ತೆರಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸಾಗಿದ ತಪಾಸಣೆ: ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರಿಗೆ ಸೇರಿದ ಎಲ್ಲ ಸಂಸ್ಥೆಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿರುವ ಜಾಲಪ್ಪ ಅವರ ಸಂಬಂಧಿ ಜಿ.ಎಚ್. ನಾಗರಾಜ್ ಅವರ ನಿವಾಸಕ್ಕೆ ಗುರುವಾರ ಬೆಳಗ್ಗೆ 11ಗಂಟೆಗೆ ಆಗಮಿಸಿದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದು, ರಾತ್ರಿ 8 ಗಂಟೆಯವರೆಗೂ ತಪಾಸಣೆ ಮುಂದುವರಿ ದಿದೆ. ಮಧ್ಯ ರಾತ್ರಿವರೆಗೂ ತಪಾಸಣೆ ಮುಂದುವರಿಯಲಿದೆ ಎಂದು ಮಾಹಿತಿಗಳು ತಿಳಿಸಿದ್ದು, ಪೂರ್ಣ ತಪಾಸಣೆ ನಡೆದ ನಂತರವೇ ಮಾಹಿತಿ ಲಭ್ಯವಾಗಲಿದೆ.