

ಮಾರನಹಳ್ಳಿ (ಶಿರಾಡಿ ಘಾಟ್): ಕಾಂಕ್ರಿಟೀಕರಣ ಕಾಮಗಾರಿಗಾಗಿ ಏಳು ತಿಂಗಳಿನಿಂದ ಮುಚ್ಚಲಾಗಿದ್ದ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಅಧಿಕೃತವಾಗಿ ವಾಹನ ಸಂಚಾರವನ್ನು ಆರಂಭಿಸಲಾಯಿತು.
ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಶಿರಾಡಿಘಾಟ್ ನ ಮಾರನಹಳ್ಳಿ ಸಮೀಪ ಸುದ್ದಿಗೋಷ್ಠಿ ನಡೆಸಿ, ಘಾಟಿ ರಸ್ತೆಯಲ್ಲಿ ಇಂದಿನಿಂದ (ಭಾನುವಾರದಿಂದ) ಲಘು ವಾಹನ ಮತ್ತು ಭಾರಿ ವಾಹನಗಳು ಸಂಚರಿಸಲು ಆನುವು ಮಾಡಿಕೊಡಲಾಗಿದೆ ಎಂದು ಘೋಷಿಸಿದರು.
ಏಳು ತಿಂಗಳಿನಿಂದ ಬಂದ್ ಆಗಿದ್ದ ಶಿರಾಡಿಘಾಟ್ ರಸ್ತೆ ಸಂಚಾರಕ್ಕೆ ಮುಕ್ತವಾಯಿತು. ಮಳೆ ಮತ್ತಿತರ ಕಾರಣಗಳಿಂದ ಮೊದಲ ಹಂತದ 13 ಕಿ.ಮೀ ಕಾಂಕ್ರೀಟಿಕರಣ ಕಾಮಗಾರಿ ತೀರ ವಿಳಂಬವಾಗಿತ್ತು. ಘಾಟಿ ರಸ್ತೆ ರಾಜ್ಯದ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ದಿ ದೃಷ್ಟಿಯಿಂದ ಜೀವನಾಡಿ ರಸ್ತೆ. ಚೆನ್ನೈ ಮತ್ತು ಮಂಗಳೂರು ಬಂದರಿಗೂ ಈ ರಸ್ತೆ ನೇರ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಅಮದು ಮತ್ತು ರಫ್ತು ಮಾಡುವ ಸರಕು ಸಾಗಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖ ಪ್ರವಾಸಿ ಕೇಂದ್ರಗಳು, ಧಾರ್ಮಿಕ ಕ್ಷೇತ್ರಗಳಿಗೂ ಸುಲಭ ಸಂಪರ್ಕ ಕಲ್ಪಿಸುತ್ತದೆ.
ಇನ್ನುಳಿದ 13 ಕಿಮೀ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆರಂಭಗೊಂಡಾಗ ಮತ್ತೆ ಘಾಟಿ ರಸ್ತೆಯನ್ನು ಬಂದ್ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‍ಗಳೊಡನೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು. ವಾಹನ ಸಂಚಾರಕ್ಕೆ ಸಾಧ್ಯವಾದಷ್ಟು ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು.
- ಡಾ. ಎಚ್.ಸಿ. ಮಹದೇವಪ್ಪ,
ಲೋಕೋಪಯೋಗಿ ಸಚಿವ