

ಬೆಂಗಳೂರು: ನಕಲಿ ಸ್ಟ್ಯಾಂಪ್ ಪೇಪರ್‍ಗಳನ್ನು ಸೃಷ್ಟಿಸಿ ಸಾರ್ವಜನಿಕರು, ಸರ್ಕಾರಕ್ಕೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ನಿವಾಸಿ ಡಿ.ಕೃಷ್ಣ (42), ಜೆ.ಪಿ. ನಗರದ ಶ್ರೀನಿವಾಸ್ (46), ಮಡಿವಾಳದ ನರಸಿಂಹ ಮೂರ್ತಿ (36) ಮತ್ತು ಮಂಗಮ್ಮನಪಾಳ್ಯದ ನದೀಮï (32)ಬಂಧಿತರು. ಆರೋಪಿಗಳಿಂದ ಅಪಾರ ಪ್ರಮಾಣದ ನಕಲಿ ಸ್ಟ್ಯಾಂಪ್ ಪೇಪರ್‍ಗಳು, ಫ್ರಾಂಕಿಂಗ್, ನೋಟರಿ ಸೀಲು, ಸಹಿ ಮಾಡಿರುವ ನಕಲಿ ಖಾಲಿ ಸ್ಟ್ಯಾಂಪ್ ಪೇಪರ್ ಗಳು, ಕಂಪ್ಯೂಟರ್, ಸ್ಟಿಕ್ಕರ್‍ಗಳು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾಲ ಕಾರ್ಯ ನಿರ್ವಹಿಸುತ್ತಿದ್ದ ಜಾಗದ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀನಿಧಿ ಎಂಟರ್‍ಪ್ರೈಸಸ್ ಹಾಗೂ ವಿನಾಯಕ ಎಂಟರ್‍ಪ್ರೈಸಸ್ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿಗಳು ಕಳೆದ 5 ವರ್ಷಗಳಿಂದ ರು.2 ಮುಖ ಬೆಲೆಯ ಸ್ಟ್ಯಾಂಪ್ ಪೇಪರ್‍ಗಳನ್ನು ಕೆ.ಜಿ. ರಸ್ತೆಯಲ್ಲಿರುವ ಕಂದಾಯ ಭವನದ ಬಳಿ ಏಜೆಂಟ್ ಆಗಿ ಕೆಲಸ ಮಾಡುವ ರಾಘವೇಂದ್ರ ಎಂಬಾತನ ಜತೆ ಕೈಜೋಡಿಸಿ, ಸ್ಟ್ಯಾಂಪ್ ಪೇಪರ್ ಗಳನ್ನು ಕಲರ್ ಜೆರಾಕ್ಸ್‍ನಿಂದ ಪ್ರಿಂಟ್ ತೆಗೆಯುತ್ತಿದ್ದರು. ಭಾಗಶಃ ಟೈಪ್ ಮಾಡಿದ ಸ್ಟ್ಯಾಂಪ್ ಪೇಪರ್‍ಗಳ ಮೇಲೆ ವಿವಿಧ ಉಪ ನೋಂದಣಾಧಿಕಾರಿಗಳ ಕಚೇರಿಯಿಂ ದ ಫ್ರಾಂಕಿಂಗ್ ಮಾಡಿಸುತ್ತಿದ್ದರು. ನಕಲಿ ಸ್ಟ್ಯಾಂಪ್ ಪೇಪರ್‍ಗಳ ಮೇಲೆ ನೋಟರಿ ಬಿ.ಎಂ. ಚಂದ್ರಶೇಖರ್ ಮತ್ತು ಎ.ಎಸ್. ನಾರಾಯಣರೆಡ್ಡಿ ಅವರಿಂ ದ ನೋಟರಿ ಸೀಲು ಮತ್ತು ಸಹಿಯನ್ನು ಹಾಕಿಸಿಕೊಳ್ಳುತ್ತಿದ್ದರು. ಕೃತ್ಯಕ್ಕೆ ಇಬ್ಬರು ನೋಟರಿಗಳು ಸಹಕರಿಸಿ-ರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಗಳಿಂದ 575 ಸಾದಾ ಸ್ಟ್ಯಾಂಪ್ ಪೇಪರ್ ಗಳು, 75 ಖಾಲಿ ಹಾಳೆ ಮೇಲೆ ಭಾಗಶಃ ಟೈಪ್ ಮಾಡಿ ಫ್ರಾಂಕಿಂಗ್ ಆಗಿರುವ ದಾಖಲಾತಿಗಳು ಹಾಗೂ ಎಸ್.ಎಸ್. ನಾರಾಯಣ ರೆಡ್ಡಿ, ನೋಂದಣಿ ಹಾಗೂ ಬಿ.ಎಂ.ಚಂದ್ರಶೇಖರ್ ಹೆಸರಿನ ಸೀಲುಗಳು, ಚಂದ್ರಶೇಖರ್ ಹೆಸರಿನ ಕೆಂಪು ಬಣ್ಣದ ಸ್ಟಿಕ್ಕರ್ ಸಹ ವಶಪಡಿಸಿಕೊಳ್ಳಲಾಗಿದೆ. ಬಸವನಗುಡಿ, ಜಯನಗರ, ಯಶವಂತಪುರ, ಯಲಹಂಕ, ರಾಜಾಜಿನಗರ, ಬನಶಂಕರಿ, ಪೀಣ್ಯ, ನಾಗರಭಾವಿ ಉಪ ನೋಂದಣಾಧಿಕಾರಿ ಕಚೇರಿಗಳಿಂದ ಫ್ರಾಂಕಿಂಗ್ ಮಾಡಿ-ಸಿರುವುದು ಸಹಾ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಪ್ರಮುಖ ಆರೋಪಿ ಡಿ. ಕೃಷ್ಣ 2005ರಲ್ಲಿ ನಕಲಿ ಸ್ಟ್ಯಾಂಪ್ ಪೇಪರ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ.