ಗೊಂದಲದ ನಡುವೆಯೇ ಬಹಿರಂಗ ಪ್ರಚಾರ ಅಂತ್ಯ

ವಾರದಿಂದ ಅಬ್ಬರಿಸಿದ ಬಿಬಿಎಂಪಿ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಗೊಂದಲದ ನಡುವೆಯೇ ಅಂತ್ಯ ಕಂಡಿದೆ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ವಾರದಿಂದ ಅಬ್ಬರಿಸಿದ ಬಿಬಿಎಂಪಿ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಗೊಂದಲದ ನಡುವೆಯೇ ಅಂತ್ಯ ಕಂಡಿದೆ.

ಮತದಾನ ಆರಂಭಕ್ಕೆ 48 ಗಂಟೆ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕೆಂದು ರಾಜ್ಯ ಚುನಾವಣಾ ಆಯೋಗ ಸೂಚಿಸಿದ್ದರಿಂದ ಅಭ್ಯರ್ಥಿಗಳ ಪ್ರಚಾರ ಆಸೆ ಕಮರಿತು.
ರೋಡ್ ಶೋಗಳು ದಿಢೀರ್ ರದ್ದಾದವು. ಅದರಲ್ಲೂ ಜೆಡಿಎಸ್ ತನ್ನೆಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ನಿರಾಶೆಗೆ ಒಳಗಾಯಿತು. ಮತದಾನಕ್ಕೆ 24 ಗಂಟೆಗಳಿಗೂ ಮೊದಲು ಪ್ರಚಾರ ಅಂತ್ಯಗೊಳಿಸಬಹುದೆಂದು ಭಾವಿಸಿ ಬಹಿರಂಗ ಪ್ರಚಾರ ಕಾರ್ಯಕ್ರಮಗಳನ್ನೂ ರೂಪಿಸಿದ್ದ ಬಹುತೇಕ ಅಭ್ಯರ್ಥಿಗಳು ನಿರಾಸೆ ಗೊಳಗಾದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಕೊಂಚ ಗೊಂದಲವಾದರೆ ಜೆಡಿಎಸ್ ಸಂಪೂ ರ್ಣ ಗೊಂದಲಕ್ಕೆ ತುತ್ತಾಗಿ ಎಲ್ಲಾ ತಂತ್ರಗಳು ತಲೆಕೆಳಗಾದವು. ಮತದಾನ ಆರಂಭಕ್ಕೆ 48 ಗಂಟೆಗೂ ಮೊದಲೇ ಪ್ರಚಾರ ಅಂತ್ಯವಾಗಬೇಕೆಂಬ  ಯೋಗದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇ ಇದಕ್ಕೆ ಕಾರಣ. ಇದೇ ರೀತಿ ಯೋಚಿಸಿದ್ದ ಜೆಡಿಎಸ್ ಆಗಸ್ಟ್ 20ರಂದು ದಿನವಿಡೀ ಕಾರ್ಯಕ್ರಮಗಳನ್ನು ರೂಪಿಸಿತ್ತು. ಮಾಧ್ಯಮಗಳಿಗೆ ಕಾರ್ಯಕ್ರಮ ಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದಿದ್ದರೂ ಬಹಿರಂಗ ಪ್ರಚಾರದ ಚಿಂತನೆಯಲ್ಲಿದ್ದವು. ಆದರೆ ಆಯೋಗದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ರದ್ದಾಯಿತು. ಸುಕಿ ಅಸಮಾಧಾನ: ಆಯೋಗದ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಸಂಸ್ಥೆ ಬಹಿರಂಗ
ಪ್ರಚಾರವನ್ನು ಗುರುವಾರ ಸಂಜೆವರೆಗೂ ವಿಸ್ತರಿಸಬೇಕೆಂದು ಒತ್ತಾಯಿಸಿದೆ. ಆಯೋಗದ ವೆಬ್‍ಸೈಟ್‍ನಲ್ಲಿ ಮತದಾನ ಆರಂಭಕ್ಕೆ 24ಗಂಟೆಗೂ ಮುನ್ನ ಪ್ರಚಾರ ಅಂತ್ಯ ಎಂದು ಹೇಳಿತ್ತು. ಆದರೆ, ಅಭ್ಯರ್ಥಿಗಳಿಗೆ ನೀಡಿರುವ ಕೈಪಿಡಿಯಲ್ಲಿ ಮತದಾನಕ್ಕೆ 48 ಗಂಟೆ ಮುನ್ನ ಎಂದು ಹೇಳಲಾಗಿದೆ.

ಇದು ಗೊಂದಲಕ್ಕೆ ದಾರಿ ಮಾಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಆರ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯೋಗ ಸಮರ್ಥನೆ: ಆದರೆ, ರಾಜ್ಯ ಚುನಾವಣಾ ಆಯೋಗ, ತನ್ನ ಕ್ರಮವನ್ನು ಸಮರ್ಥಿಸಿದೆ. ಆಗಸ್ಟ್ 22ರಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿರುವುದರಿಂದ ಚುನಾವಣೆಯ ಬಹಿರಂಗ ಪ್ರಚಾರ 20ರಂದು ಬೆಳಗ್ಗೆ 7ಗಂಟೆಗೆ ಅಂತ್ಯವಾಗುತ್ತದೆ. ಆದ್ದರಿಂದ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಬೇಕಿದ್ದರೆ ಪಕ್ಷದ ಅಭ್ಯರ್ಥಿಗಳು ಮನೆಗಳಿಗೆ ತೆರಳಿ ಮತಯಾಚನೆ ಮಾಡಬಹುದು ಎಂದು ಹೇಳಿದೆ.

ಸ್ಥಳೀಯ ಸಂಸ್ಥೆಗಳಿಗೆ ಕೆಎಂಸಿ ಕಾಯ್ದೆ ಮತ್ತು ಪಂಚಾಯತ್ ರಾಜ್ ಕಾಯ್ದೆಗಳ ಪ್ರಕಾರ ಚುನಾವಣೆ ನಡೆಯಲಿದ್ದು, ಇದರಲ್ಲಿ ಬಹಿರಂಗ ಪ್ರಚಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಯಾವುದೇ ಗೊಂದಲ ಬೇಡ ಎಂದು ಆಯೋಗದ ಕಾರ್ಯದರ್ಶಿ ಹೊನ್ನಾಂಬ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com