

ಬೆಂಗಳೂರು: ಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.
ಕಣದಲ್ಲಿದ್ದ ಬಹುತೇಕ ಅಭ್ಯರ್ಥಿಗಳು ಶನಿವಾರ ರಾತ್ರಿಯೇ ಮೊಬೈಲ್‍ಗಳನ್ನು ಬಂದ್ ಮಾಡಿ ವಿಶ್ರಾಂತಿಗೆ ಜಾರಿದ್ದರು. ಭಾನುವಾರ ತಮ್ಮ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿ ಮತದಾನದ ನಂತರದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ಕೆಲವು ವೈಯುಕ್ತಿಕ ಕೆಲಸಗಳನ್ನೂ ಮುಗಿಸಿಕೊಂಡು ಮನರಂಜನೆ ಕಾರ್ಯ ಕ್ರಮಗಳಿಗೂ ಹೋಗಿದ್ದಾರೆ. ಇನ್ನು ಕೆಲವು ಅಭ್ಯರ್ಥಿಗಳು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥನೆಯನ್ನೂ ಮಾಡಿದ್ದಾರೆ.
ವಾರದಿಂದ ಪ್ರಚಾರ, ಮನೆಮನೆಗೆ ಅಲೆದಾಟ, ಸದ್ದುಗದ್ದಲದಿಂದ ಬಿಸಿಯಾಗಿದ್ದ ಅಭ್ಯರ್ಥಿಗಳು ಈಗ ಮೌನಕ್ಕೆ ಶರಣಾಗಿದ್ದಾರೆ. ಹಾಗೆಯೇ ಮನದಲ್ಲೇ ಸೋಲುಗೆಲುವಿನ ಲೆಕ್ಕಾಚಾರ ಮಾಡುತ್ತಾ ಗಾಬರಿಗೂ ಒಳಗಾಗುತ್ತಿದ್ದಾರೆ. ಶನಿವಾರದ ಒಟ್ಟಾರೆ ಮತದಾನ ಪ್ರಮಾಣದ ಏರಿಕೆ, ಇಳಿಕೆ ಬಗ್ಗೆ ಗಮನ ಹರಿಸುತ್ತಿದ್ದ ಅಭ್ಯರ್ಥಿಗಳಿಗೆ ಈಗ ತಮ್ಮ ವಾರ್ಡ್‍ಗಳಲ್ಲಿ ನಡೆದಿರುವ ಮತದಾನ ಪ್ರಮಾಣವೂ ಗೊತ್ತಾಗಿದೆ. ಬಹುತೇಕ ಎಲ್ಲಾ ವಾರ್ಡ್ ಗಳಲ್ಲೂ ಶೇ.48ರಿಂದ ಶೇ.53ರವರೆಗೂ ಮತದಾನ ನಡೆದಿದ್ದು, ಇದನ್ನಾಧರಿಸಿ ಅಭ್ಯರ್ಥಿಗಳು ತಮಗೆ ಎಷ್ಟು ಮತ ಸಿಗಬಹುದು? ಎದುರಾಳಿಗೆ ಎಷ್ಟು ಮತ ಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಗಾಬರಿ ತಂದ ಸಮೀಕ್ಷೆಗಳು: ಇಷ್ಟು ದಿನ ಬಿಬಿಎಂಪಿಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ಬಗ್ಗೆ ಬೇರೆ ಬೇರೆ ಆಯಾಮಗಳಲ್ಲಿ ಚರ್ಚಿಸುತ್ತಿದ್ದ ಅಭ್ಯರ್ಥಿಗಳು ಈಗ ಮೊದಲು ತಾವು ಗೆದ್ದರೆ ಸಾಕು ಎನ್ನುತ್ತಿದ್ದಾರೆ. ಏಕೆಂದರೆ, ಅನೇಕ ಮಾಧ್ಯಮಗಳಲ್ಲಿ ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಕೆಲವು ಮಾಧ್ಯಮಗಳು ಯಾವ ವಾರ್ಡ್‍ನಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎನ್ನುವುದನ್ನೂ ವಿಶ್ಲೇಷಿಸಿವೆ. ಇದು ಸಹಜವಾಗಿಯೇ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದು, ಅವರೀಗ ತಮ್ಮ ಬೆಂಬಲಿಗರನ್ನು ಕೂಡಿಸಿಕೊಂಡು ಯಾವ ಬೂತ್‍ನಲ್ಲಿ ಎಷ್ಟು ಮತದಾನವಾಗಿದೆ.
ಅದರಲ್ಲಿ ನಮಗೆ ಸಿಗಬಹುದಾದ ಮತಗಳೆಷ್ಟು? ಎಲ್ಲೆಲ್ಲಿ ಜಾತಿ ಲೆಕ್ಕಾಚಾರ, ಪಕ್ಷ ಲೆಕ್ಕಾಚಾರ ಮತ್ತು ತಮ್ಮ ಸ್ವಂತ ಪ್ರಭಾವದಿಂದ ಎಷ್ಟು ಮತಗಳು ಸಿಗಬಹುದು ಎಂದು ಗುಣಕಾರ, ಭಾಗಕಾರ ಮಾಡುತ್ತಿದ್ದಾರೆ. ಒಟ್ಟಾರೆ ಶೇ.49.31ರಷ್ಟು ಮತದಾನ ನಡೆದಿದ್ದು, ಪ್ರಮಾಣದಲ್ಲಿ ಆದ ಹೆಚ್ಚಳ ಶೇ.5ರಷ್ಟು ಮಾತ್ರ. ಈ ಹೆಚ್ಚಳ ತಮ್ಮ ಗೆಲುವಿಗೆ ಹೇಗೆ ಸಹಕಾರಿಯಾಗಬಹುದು ಎಂಬ ಗೊಂದಲವೂ ಅವರನ್ನು ಕಾಡುತ್ತಿದೆ.