ಬೆಂಗಳೂರು: ಆಂಧ್ರದ ಪೆನಕೊಂಡದಲ್ಲಿ ಸಂಭವಿಸಿ ದ ರೈಲು ಅಪಘಾತದಲ್ಲಿ ಟಿ.ಎಸ್.ಡಿ. ರಾಜ್ ಅವರು ಆಕಸ್ಮಿಕವಾಗಿ ಮೃತಪಟ್ಟರೂ ಬೇರೆ ಯವರ ಬಾಳಿಗೆ ದೀಪವಾಗಿದ್ದಾರೆ.
ಸಾವಿನ ನಂತರ ತಮ್ಮ ಆಸೆಯಂತೆ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಬೆಂಗಳೂರಿನ ಸಂಜಯ ನಗರದ ಭೂಪಸಂದ್ರದಲ್ಲಿ ಸಹೋದರಿ ಜಯಶ್ರೀ ಜತೆ ವಾಸಿಸುತ್ತಿದ್ದ ಅವರು, ಕೆಲಸ ನಿಮಿತ್ತ ರಾಯಚೂರಿಗೆ ತೆರಳಿದ್ದರು. ಈ ವೇಳೆ ರೈಲು ಅಪಘಾತದಲ್ಲಿ ಜೀವ
ಕಳೆದುಕೊಂಡ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಗರಕ್ಕೆ ತರಲಾಯಿತು. ಕುಟುಂಬ ಸದಸ್ಯರಿಗೆ ಮೊದಲೇ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕಾಗಮಿಸಿದ ಮಿಂಟೋ ಆಸ್ಪತ್ರೆ ವೈದ್ಯರು ಅವರ ಎರಡೂ ಕಣ್ಣುಗಳನ್ನು ತೆಗೆದುಕೊಂಡರು. ಆದರೆ, ಆ ಕಣ್ಣುಗಳನ್ನು ಯಾರಿಗೆ ನೀಡಲಾಗುತ್ತದೆ ಎಂಬುದನ್ನು ವೈದ್ಯರು ಖಚಿತಪಡಿಸಿಲ್ಲ.
15 ದಿನಕ್ಕೊಮ್ಮೆ ಪರಿಶೀಲನೆ: ಅವಿವಾಹಿತರಾಗಿರುವ ರಾಜು ಅವರು ನಗರದ ಕೀಟನಾಶಕ ಕಂಪನಿ ಇಂಡೋಫಿಲ್ ಇಂಡಸ್ಟ್ರೀಸ್‍ನಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ಕಂಪನಿಯ ಬೇರೆ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಖರೀದಿ ಮತ್ತು ಮಾರಾಟ ಕುರಿತು ಪರಿಶೀಲಿಸುತ್ತಿದ್ದರು. ಭಾನುವಾರ ರಾತ್ರಿ ನಾಂದೆಡ್ ಎಕ್ಸ್‍ಪ್ರೆಸ್‍ನಲ್ಲಿ ರಾಯಚೂರಿಗೆ ತೆರಳುತ್ತಿದ್ದರು ಎಂದು ಸ್ನೇಹಿತ ಪಿ.ಶಶಾಂಕ್ ತಿಳಿಸಿದ್ದಾರೆ. ಅಮೆರಿಕ ದಲ್ಲಿ ವ್ಯಾಸಂಗ ಮಾಡಿದ್ದ ಅವರು ಕೃಷಿ ವಿಭಾಗದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಮಾಡಿದ್ದರು.