

ಬೆಂಗಳೂರು: ಬಿಬಿಎಂಪಿಯಲ್ಲಿ 100 ಸ್ಥಾನ ಗೆದ್ದು ಸಮಾಧಾನದಿಂದ ಬೀಗುತ್ತಿದ್ದ ಬಿಜೆಪಿಯಲ್ಲೀಗ ತಳಮಳ ಹೆಪ್ಪುಗಟ್ಟಿದೆ. ಚುನಾವಣೆ ಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಗಳಿಸಿದರೂ, ಮೇಯರ್ ಹುದ್ದೆ ಕೂದಲೆಳೆಯಲ್ಲಿ ಕೈ ತಪ್ಪಿಹೋಗುವ ಆತಂಕ ಪಕ್ಷದಲ್ಲಿ ಮನೆ ಮಾಡಿದ್ದು, ಹೇಗಾದರೂ ಸೆಡ್ಡು ಹೊಡೆ ಯಲು ಪಕ್ಷದ ಮುಖಂಡರು ರಣತಂತ್ರ ರೂಪಿಸಿದ್ದಾರೆ.
ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಟೀಕಿಸುತ್ತಿ ರುವ ಬಿಜೆಪಿ ನಾಯಕರ ಮುಖದಲ್ಲಿ ಮಾತ್ರ ಮನಸ್ಸಿನೊಳಗಿನ ಆತಂಕ ಎದ್ದು ಕಾಣುತ್ತಿದೆ. ಚುನಾವಣೆ ಫಲಿತಾಂಶ ಬಂದಾಗಿನ ಖುಷಿ ಈಗಿಲ್ಲ. ಏನಾಗುತ್ತದೋ ಎಂಬ ಅಳುಕೇ ತುಂಬಿಕೊಂಡಿದೆ.
ಬೆಳಗಾಗುತ್ತಲೇ ಎಲ್ಲಾ ಬದಲು:
ರಾತ್ರಿ ಐವರು ಪಕ್ಷೇತರ ಕಾರ್ಪೊರೇಟರ್ ಗಳೊಂದಿಗೆ ಸಭೆ ನಡೆಸಿದ್ದ ಬಿಜೆಪಿ ನಾಯಕರು ಶುಕ್ರವಾರ ಬೆಳಗ್ಗೆದ್ದು ನೋಡುವುದರೊಳಗೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ರಾತ್ರಿ 10-11 ಗಂಟೆವರೆಗೆ ಜೊತೆಗಿದ್ದು, ಬಿಜೆಪಿಗೆ ಬೆಂಬಲಿಸುತ್ತೇವೆಂದ ಪಕ್ಷೇತರರ ಪೈಕಿ 7 ಮಂದಿ ಬೆಳಗ್ಗೆಯೊಳಕೆ ಶಾಕ್ ನೀಡಿದ್ದರು.
ಹೇಗಾದರೂ 4-5 ಪಕ್ಷೇತರರನ್ನು ಮನವೊಲಿಸಬೇಕೆಂಬ ಬಿಜೆಪಿ ನಾಯಕರ ಕಸರತ್ತು ಕೈಗೂಡದಂತೆ ವ್ಯವಸ್ಥೆಯೊಂದು ಎದುರಿಗೆ ಕೋಟೆ ಕಟ್ಟಿಕೊಂಡು ನಿಂತಿದ್ದು ಬಿಜೆಪಿ ನಾಯಕರನ್ನು ಹೈರಾಣಾಗಿಸಿತ್ತು. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕಾರ್ಯತಂತ್ರ ಜೋರಾಗಿದೆ ಎಂದರಿತ ಬಿಜೆಪಿ ಬಿಬಿಎಂಪಿ ಚುನಾವಣಾ ಉಸ್ತುವಾರಿ ಆರ್. ಅಶೋಕ್ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎದುರಾಳಿ ಪಕ್ಷಗಳ ವಿರುದಟಛಿ ಹರಿಹಾಯ್ದರು. ಬೆಂಗಳೂರಿನ ಮತದಾರ ನೀಡಿದ ತೀರ್ಪು ಒಪ್ತೇವೆ ಎಂದು ಸಿಎಂ ಸಾರ್ವಜನಿಕವಾಗಿ ಹೇಳಿದ್ದರು. ಆದರೆ, ಈ ಹೊಸ ಬೆಳವಣಿಗೆ ಆಘಾತ ತಂದಿದೆ ಎಂದರು.
ತಳಮಳ ಹೆಚ್ಚಿಸಿದ ಜೆಡಿಎಸ್: ಈ ಮಧ್ಯೆ ಬಿಜೆಪಿಗೆ ಪ್ರತಿ ಸಂದೇಶ ಕಳುಹಿಸುವಂತೆ ಜೆಡಿಎಸ್ ಮುಖಂಡರು, ಪಾಲಿಕೆ ಸದಸ್ಯರು ಒಟ್ಟಾಗಿ ಸಭೆ ನಡೆಸಿದ್ದು; ವೈ.ಎಸ್.ವಿ.ದತ್ತಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದು; ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯಲ್ಲಿ ಒಂದಷ್ಟು ತಳಮಳ ಹೆಚ್ಚಲು ಕಾರಣವಾಯಿತು. ಇದೇ ವೇಳೆ ವಿಧಾನಪರಿಷತ್‍ನ ಪಕ್ಷೇತರ ಶಾಸಕ ಮಲ್ಲಿಕಾರ್ಜುನ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.