

ಗದಗ: ಮಹಾದಾಯಿ ಮಲಪ್ರಭಾ ನದಿ ಜೋಡಣೆಗೆ ಆಗ್ರಹಿಸಿ ನಡೆಯುತ್ತಿರುವ ಗದಗ ಜಿಲ್ಲಾ ಬಂದ್ ಹಿಂಸಾಚಾರಕ್ಕೆ ತಿರುಗಿದೆ.
ನರಗುಂದ ಪ್ರದೇಶದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಛೇರಿಯ ಮೇಲೂ ಕಲ್ಲು ತೂರಾಟ ನಡೆಸಿದ್ದು, ಕಚೇರಿಯ ಕಿಟಕಿಯ ಗಾಜುಗಳು ಚೂರಾಗಿವೆ ಎಂದು ತಿಳಿದು ಬಂದಿದೆ.
ಖಾಸಗಿ ಬೈಕಿಗೆ ಬೆಂಕಿ ಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಗದಗ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ಕನ್ನಡಪರ ಸಂಘಟನೆಗಳು, ವ್ಯಾಪಾರಸ್ಥರಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಕೆಲ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾದ್ಯಂತ ಸರ್ಕಾರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.