

ಬೆಂಗಳೂರು: ಬರಡಾದ ಹಸು ಮತ್ತು ಎಮ್ಮೆಗಳು ಕಸಾಯಿಖಾನೆಗೆ ಸಾಗಾಟವಾಗುವುದನ್ನು ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದ್ದು, ದೇಶಾದ್ಯಂತ ಬರಡಾದ ಪಶು ಖರೀದಿ ಕೇಂದ್ರ ತೆರೆಯುವುದಕ್ಕೆ ರು.100000 ಕೋಟಿ ಅನುದಾನ ನೀಡಬೇಕು ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋವು ಈ ದೇಶದ ಬಹುಸಂಖ್ಯಾತರ ಪೂಜನೀಯ ಪ್ರಾಣಿ. ಆದರೆ ಬರಡಾದ ಹಸುಗಳನ್ನು ಏನು ಮಾಡಬೇಕೆಂಬ ಸಮಸ್ಯೆ ಉದ್ಭವವಾಗಿದೆ. ಹಾಲು ನೀಡದ ಹಸುವನ್ನು ಏನು ಮಾಡಬೇಕೆಂಬ ಸಮಸ್ಯೆ ರೈತರನ್ನು ಕಾಡುತ್ತಿದೆ. ನಿಮ್ಮ ಮನೆಯಲ್ಲಿ ಬರಡಾದ ಹಸು ಇದ್ದರೆ ಏನು ಮಾಡುತ್ತೀರಿ ? ಎಂದು ಬಿಜೆಪಿಯವರಿಂದಲೂ ನಾನು ಸಲಹೆ ಪಡೆಯುವುದಕ್ಕೆ ಇಷ್ಟಪಡುತ್ತೇನೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗೋಹತ್ಯೆ ವಿಚಾರವನ್ನು ಪ್ರಸ್ತಾಪಿಸುವ ಬದಲು ಶಾಶ್ವತ ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಹಿಂದೆ ಕೇಂದ್ರ ಯೋಜನಾ ಆಯೋಗದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೆ. ದೇಶವ್ಯಾಪಿ ಅನ್ವಯವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ಬರಡಾದ ಹಸುಗಳನ್ನು ಅರ್ಧ ದರಕ್ಕೆ ಖರೀದಿಸಿ ಗೋ ಶಾಲೆಗಳಲ್ಲಿ ಸಲಹಬೇಕು. ಆಗ ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾಗುವುದಿಲ್ಲ. ಇಲ್ಲವಾದರೆ ಬರಡು ಹಸುಗಳನ್ನು ಯಾರು ಬೇಕಾದರೂ ಖರೀದಿಸುವುದಕ್ಕೆ ಅವಕಾಶ ನೀಡಿ ಸಾಗಣೆ ಮಾಡುವಾಗ ಹಿಡಿದು ಕೇಸ್ ದಾಖಲಿಸಿದರೆ ಏನು ಪ್ರಯೋಜನ ? ಎಂದು ಪ್ರಶ್ನಿಸಿದರು.
ಸಾಬ್ರು ತಿನ್ನೋ ಗೋಮಾಂಸ ಬ್ಯಾನ್ ಮಾಡಿ ಎನ್ನುತ್ತಾರೆ. ಕುರಿ-ಕೋಳಿ ಮಾಂಸ ಯಾಕೆ ಬ್ಯಾನ್ ಮಾಡಿ ಅನ್ನಲ್ಲ ಎಂದು ಪ್ರಶ್ನಿಸಿದ ಅವರು, ಆದರೂ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವುದಕ್ಕೆ ಗೋಹತ್ಯೆ ಕಾರಣವಾಗುತ್ತದೆ ಎನ್ನುವುದಾದರೆ ಕೇಂದ್ರ ಸರ್ಕಾರ ಬರಡು ಹಸುಗಳ ಖರೀದಿಗೆ ರಾಷ್ಟ್ರೀಯ ನಿಯಮ ರೂಪಿಸಲಿ ಎಂದು ಅಭಿಪ್ರಾಯಪಟ್ಟರು.
ಇಸ್ಲಾಮಿಕ್ ಕನ್ನಡಕ ತೆಗೆಯಲಿ : ಪ್ರೊ. ಬರಗೂರು ರಾಮಚಂದ್ರ ಅಧ್ಯಕ್ಷತೆಯ ಪ್ರೌಢಶಾಲಾ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಎದುರು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಸಂಸ್ಥೆ ಪ್ರತಿನಿ„ಗಳು ನೀಡಿರುವ ವಿವಾದಾತ್ಮಕ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಇಸ್ಲಾಮಿಕ್ ಕನ್ನಡಕವನ್ನು ತೆಗೆದಿಟ್ಟು ಮುಸ್ಲಿಂ ೇಮುಖಂಡರು ಭಾರತ ದೇಶವನ್ನು ನೋಡಬೇಕು ಎಂದು ಮನವಿ ಮಾಡಿದರು.
ಹಿಂದೂಗಳು ಭಾರತ ಮಾತೆಯನ್ನು ದೇವರು ಎಂದು ಕಾಣುತ್ತಾರೆ. ಮುಸ್ಲಿಂರು ತಾಯಿ ಎನ್ನುತ್ತಾರೆ. ಮಕ್ಕಳ ಕಲಿಕೆಗೆ ಎಲ್ಲ ಧರ್ಮಗಳ ಒಳ್ಳೆಯ ಅಂಶಗಳು ಇರಬೇಕು. ಇಂಥ ಸಣ್ಣ ವಿಚಾರಗಳಿಗೆಲ್ಲ ಧರ್ಮದ ಕನ್ನಡಕ ಹಾಕಿ ನೋಡುವುದು ಸರಿಯಲ್ಲ. ಕುವೆಂಪು ಅವರ ನಾಡಗೀತೆಯಲ್ಲಿ ಕನ್ನಡಾಂಬೆಯನ್ನು ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಅದ್ಭುತವಾಗಿ ಬಣ್ಣಿಸಿದ್ದಾರೆ. ಇದನ್ನು ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂದರು. ನಾನು ಮುಸ್ಲಿಂ ಬಂದುಗಳಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ಐಎಸ್ ಐಎಸ್‍ನಂಥ ಸಂಘಟನೆಗಳು ಇಸ್ಲಾಮಿಗೆ ವಿರುದ್ಧವಾಗಿವೆ ಎಂದು ಹೇಳಿದರು