

ಬೆಂಗಳೂರು: ಮಹಾಮಾರಿ ಎಚ್1ಎನ್1ಗೆ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದ್ದು, ತೀವ್ರ ಜ್ವರ ಮತ್ತು ಶೀತದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತ್ನಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ವೈಟ್‌ಫೀಲ್ಡ್ ಬಳಿ ಇರುವ ವೈದೇಹಿ ಆಸ್ಪತ್ರೆಯಲ್ಲಿ 35 ವರ್ಷದ ರತ್ನಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ವೈದ್ಯಕೀಯ ವರದಿಗಳ ಪ್ರಕಾರ ಎಚ್1ಎನ್1ನಿಂದಲೇ ರತ್ನಮ್ಮ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಕರ್ನಾಟಕದಲ್ಲಿ ಮಾಹಾಮಾರಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 4ಕ್ಕೇರಿದೆ. ಆರಂಭದಲ್ಲಿ ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ರತ್ನಮ್ಮಗೆ ನ್ಯುಮೋನಿಯಾ ಆಗಿರಬಹುದು ಎಂದು ತಿಳಿದು ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ರತ್ನಮ್ಮರ ದೇಹದಲ್ಲಾದ ಬದಲಾವಣೆಗಳನ್ನು ಗಮನಿಸಿದ ವೈದ್ಯರು ಕೂಡಲೇ ಆಕೆಯನ್ನು ಎಚ್1ಎನ್1 ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರು. ತೀವ್ರ ಅಸ್ವಸ್ಥರಾಗಿದ್ದ ರತ್ನಮ್ಮರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ರತ್ನಮ್ಮ ಸಾವನ್ನಪ್ಪಿದ್ದಾರೆ. ಈ ಹಿಂದೆ ಬೀದರ್‌ನಲ್ಲಿ ಮೂವರ ಬಲಿ ಪಡೆದಿದ್ದ ಮಹಾಮಾರಿ ಎಚ್1ಎನ್1 ಬೆಂಗಳೂರಿನಲ್ಲಿಯೂ ಮೊದಲ ಬಲಿ ಪಡೆದಿದೆ.
ಇನ್ನು ಬೆಂಗಳೂರಿನಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಹಲವು ಎಚ್1ಎನ್1 ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಶೀತಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯಲ್ಲಿ ಎಚ್1ಎನ್1 ಇರುವುದು ದೃಡಪಟ್ಟಿದೆ. ಹೀಗಾಗಿ ಮಹಿಳೆಯನ್ನು ಎಚ್1ಎನ್1 ವಿಶೇಷ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.