

ಉಸಿರಾಟಕ್ಕೆ ಕಡ್ಡಾಯವಾಗಿ ಮಾಸ್ಕ್ ಬಳಸಿ, ಇತರರಿಗೂ ರೋಗ ಹರಡದಂತೆ ಎಚ್ಚರ ವಹಿಸಿ! ರಾಜ್ಯದ ವಿವಿಧೆಡೆ ನಾಲ್ವರನ್ನು ಬಲಿತೆಗೆದುಕೊಂಡಿರುವ ಎಚ್1 ಎನ್1 ಜ್ವರದ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲಾ , ತಾಲೂಕು ಹಾಗೂ ಪ್ರಾಥವಿಕ ಹಂತದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವೈದಾಧಿಕಾರಿಗಳಿಗೆ ಸೂಚನೆ ನೀಡಿದೆ. ಜತೆಗೆ ರೋಗ ನಿಯಂತ್ರಣಕ್ಕೆ ಕೈ ಜೋಡಿಸುವಂತೆ ಖಾಸಗಿ ಆಸ್ಪತ್ರೆ ಆಸ್ಪತ್ರೆಗಳಿಗೆ ಮನವಿ ಮಾಡಿದೆ.
ಈ ನಡುವೆಯೇ, ರೋಗ ಬರದಂತೆ ತಡೆಗಟ್ಟಲು ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಲು ಮುಂದಾಗಿದೆ.
ರೋಗ ಹರಡದಂತೆ ಮನೆ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕೆಂದು ಕೋರಿದೆ. ಪತ್ತೆಯಾದ ತಕ್ಷಣವೇ ಎಚ್ಚರ ವಹಿಸಿ ಚಿಕಿತ್ಸೆ ಪಡೆಯಬೇಕು, ರೋಗಿಗಳು ಉಸಿರಾಟಕ್ಕೆ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಇತರರಿಗೂ ರೋಗಹರಡದಂತೆ ಎಚ್ಚರವಹಿಸಬೇಕು ಸಾರ್ವಜನಿಕರಲ್ಲಿ ವಿನಂತಿಸಿದೆ.
ಎಚ್1ಎನ್1 ಸಾಂಕ್ರಾಮಿಕ ರೋಗವಾಗಿದ್ದು, ಆಂಧ್ರ ಪ್ರದೇಶ, ತೆಲಂಗಾಣದಿಂದ ರಾಜ್ಯಕ್ಕೂ ಕಾಲಿಟ್ಟಿದೆ. ಚಳಿಯ ಹಿನ್ನೆಲೆಯಲ್ಲಿ ಈಗಾಗಲೇ ಮೂವರಿಗೆ ರೋಗದ ಲಕ್ಷಣ ಕಂಡು ಬಂದು ಮೃತಪಟ್ಟಿದ್ದಾರೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಅದರ ಪ್ರಭಾವ ಅಷ್ಟೇನು ಪ್ರಮಾಣದಲ್ಲಿ ಕಂಡು ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ `ಕನ್ನಡ ಪ್ರಭ'ಕ್ಕೆ ತಿಳಿಸಿದರು.
ಲ್ಯಾಬೊರೇಟರಿ ಸೌಲಭ್ಯ
ರೋಗದ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಇದುವರೆಗೂ 70 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಜಿಲ್ಲಾ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ರೋಗದ ನಿಯಂತ್ರಣಕ್ಕೆ ಔಷಧ ಲಭ್ಯವಾಗುತ್ತಿದೆ. ಜತೆಗೆ, ಖಾಸಗಿ ಆಸ್ಪತ್ರೆಗಳೂ ಕೂಡ ರೋಗ ನಿಯಂತ್ರಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ ಎಂದು ಅವರು ವಿವರಿಸಿದರು.
ಸೋಂಕು ತಗುಲಿದವರ ರಕ್ತ ಪರೀಕ್ಷೆಗೆ ರಾಜ್ಯದಲ್ಲೀಗ ಮಂಗಳೂರು, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಲ್ಯಾಬೊರೇಟರಿಗಳು ಲಭ್ಯವಿವೆ. ಇಲ್ಲಿ ಪ್ರಕರಣಗಳ ರಕ್ತ ಪರೀಕ್ಷೆಯನ್ನು ತ್ವರಿತ ವಾಗಿ ನಡೆಸಿ, ಸೂಕ್ತ ಚಿಕಿತ್ಸೆ ನೀಡಲು ಸಹಕರಿಸುವಂತೆ ಸೂಚಿಸಲಾಗಿದೆ. ಉಳಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಈ ಸೌಲಭ್ಯದ ಕೊರತೆಯಿದೆ. ಆದ್ದರಿಂದ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಜ್ವರಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದವರ ರಕ್ತ ಪರೀಕ್ಷೆಯನ್ನು ತ್ವರಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಸ್ಪೀಡ್ ಕೊರಿಯರ್ ಮೂಲಕ ಬೆಂಗಳೂರು ಅಥವಾ ಸನ್ನಿಹದ ಇತರೆ ಕಡೆಗಳಿಗೆ ರಕ್ತದ ಸ್ಯಾಂಪಲ್ ಕಳುಹಿಸಿ, ಪರೀಕ್ಷೆ ನಡೆಸುವ ಮೂಲಕ ಅವರಿಗೆ ಅಗತ್ಯವಾಗಿ ಬೇಕಾಗುವ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳ ವೈದ್ಯಾಧಿ ಕಾರಿಗಳಿಗೆ ಸೂಚನೆ ನೀಡಿದೆ ಎಂದರು.
ಸಾಂಕ್ರಾಮಿಕ ಕಾಯಿಲೆಗಳಿಗೆ ಒಳಗಾದ ರೋಗಿಗಳ ರಕ್ತ ಪರೀಕ್ಷೆಯನ್ನ ತ್ವರಿತವಾಗಿ ನಡೆಸಲು ಉತ್ತರ ಕರ್ನಾಟಕ ಯಾವುದೇ ಜಿಲ್ಲೆಯಲ್ಲೂ ಈಗ ಸರ್ಕಾರಿ ಪ್ರಯೋ ಗಾಲಯ ಇಲ್ಲ. ಸದ್ಯ, ಇಲ್ಲಿನ, ಯಾವುದೇ ರೋಗಿಯ ರಕ್ತ ಪರೀಕ್ಷೆಯ ಸ್ಯಾಂಪಲ್ ಬೆಂಗಳೂರಿಗೆ ಬರುತ್ತೆ. ಹೀಗಾಗಿ ಆರೋಗ್ಯ ಇಲಾಖೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರಯೋಗಾಲಯ ತೆರೆಯಲು ಮುಂದಾ ಗಿದೆ. ಮೊದಲ ಹಂತದಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಲ್ಯಾಬೊರೇಟರಿ ಸ್ಥಾಪನೆಯಾಗಲಿವೆ. ಜತೆಗೆ ಮೈಸೂರಿನಲ್ಲೂ ಶುರುವಾಗಲಿದೆ ಎಂದು ಖಾದರ್ ತಿಳಿಸಿದರು. ಸೋಂಕು ತಗುಲದಂತೆ, ಎಚ್ಚರ ವಹಿಸಲು ಮುಂಜಾಗ್ರತವಾಗಿ ಚುಚ್ಚುಮದ್ದು ತೆಗೆದುಕೊಳ್ಳುವ ಸಲಹೆಗಳನ್ನು ತಳ್ಳಿ ಹಾಕಿದ ಅವರು, ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗಲಿದೆ. ಹಾಗೊಂದು ವೇಳೆ, ರೋಗದ ಲಕ್ಷಣ ಕಂಡು ಬಂದವರಿಗೆ ಚಿಕಿತ್ಸೆ ನೀಡಿ ದ್ದಾಗ್ಯೂ,ಫಲಕಾರಿಯಾಗದಿರುವ
ಅಪಾ ಯಗಳಿವೆ. ಹೀಗಾಗಿ ರೋಗ ಬರುವ ಮುನ್ನವೇ ಚುಚ್ಚುಮದ್ದು ತೆಗೆದು ಕೊಳ್ಳುವ ಕ್ರಮ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ
ಜ್ವರದಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇಷ್ಟಾಗಿಯೂ ಯಾರಾದರೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಬಗ್ಗೆ ನೊಂದ ಸಾರ್ವಜನಿಕರಿಂದ ದೂರುಗಳು ಬಂದರೆ, ಅವುಗಳನ್ನು ಗಂಭೀರವಾಗಿ
ಪರಿಗಣಿಸಲಾಗುವುದು.
ಕರಪತ್ರ ಹಂಚಿಕೆ
ಬೆಂಗಳೂರು ನಗರದಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೂ ನಗರದಲ್ಲಿ 38 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರೋಗದ ಲಕ್ಷಣಗಳು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರಪತ್ರ ಮುದ್ರಿಸಿ, ಬಡಾವಣೆಗಳಲ್ಲಿ ವಿತರಿಸಲಾಗುವುದು. ಹಾಗೆಯೇ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿಮಾಹಿತಿಗೆ ಮತ್ತು ಚಿಕಿತ್ಸೆ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗುವುದು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಎಚ್1ಎನ್1 ಜ್ವರಕ್ಕೆ ಇದುವರೆಗೂ ಮೂವರು ಬಲಿಯಾಗಿದ್ದಾರೆ. ಉಳಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇದಕ್ಕೆ ತಳುಕು ಹಾಕಲಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಸಾರ್ವಜನಿಕರು ಭಯ ಪಡಬೇಕಿಲ್ಲ. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
- ಯು.ಟಿ.ಖಾದರ್, ಆರೋಗ್ಯ ಸಚಿವ
ನಿಮಗೂ ಬೇಕು ಮುಂಜಾಗ್ರತೆ
ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯು ರೋಗ ನಿಯಂತ್ರಣ ಮತ್ತು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಷ್ಟೇ ಮುಖ್ಯವಾಗಿ
ಸಾರ್ವಜನಿಕರು ಕೂಡ ಮುಂಜಾಗ್ರತೆ ತೆಗೆದುಕೊಳ್ಳ ಬೇಕಾಗುತ್ತದೆ. ಈಗ ಎಚ್1 ಎನ್1 ವಿಚಾರದಲ್ಲೂ ಸಾರ್ವಜನಿಕರು ಅಷ್ಟೇ ಎಚ್ಚರಿಕೆ ವಹಿಸಬೇಕಿದೆ. ತೀವ್ರ ಜ್ವರ
ಕಾಣಿಸಿಕೊಂಡವರು, ಮುಚ್ಚಿಟ್ಟು ಕೂರುವುದು ಸರಿಯಲ್ಲ. ತಕ್ಷಣವೇ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು
ಪತ್ತೆಯಾದರೆ, ಉಸಿರಾಟಕ್ಕೆ ಮಾಸ್ಕ್ ಬಳಸಬೇಕು. ಮನೆಯಲ್ಲಿ ಇತರರಿಗೂ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಗುಣಮುಖರಾಗುವು ತನಕ ಆಹಾರ ಮತ್ತು
ಜೀವನ ಕ್ರಮದಲ್ಲಿ ನಿಗಾ ವಹಿಸಬೇಕು. ಜತೆಗೆ, ಸಾರ್ವಜನಿಕರು ಕೂಡ ತಮ್ಮ ತಮ್ಮ ಮನೆಯ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.