ಲೋಕಾಯುಕ್ತಕ್ಕೆ ಐಎಎಸ್ ಅಧಿಕಾರಿಗಳಿಂದಲೂ ಲಂಚ

ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಐಎಎಸ್ ಅಧಿಕಾರಿಗಳೇ ಲೋಕಾಯುಕ್ತಕ್ಕೆ ಲಂಚ ನೀಡಿದ್ದಾರೆ- ಹೆಚ್.ಡಿ ಕುಮಾರಸ್ವಾಮಿ.
ಹೆಚ್.ಡಿ ಕುಮಾರಸ್ವಾಮಿ
ಹೆಚ್.ಡಿ ಕುಮಾರಸ್ವಾಮಿ
Updated on: 

ಬೆಳಗಾವಿ: ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಐಎಎಸ್ ಅಧಿಕಾರಿಗಳೇ ಲೋಕಾಯುಕ್ತಕ್ಕೆ ಲಂಚ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಸದನಕ್ಕೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೂಚನೆ ನೀಡಿದ್ದಾರೆ.

ಲೋಕಾಯುಕ್ತರ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ನಿಯಮ 69 ರ ಅಡಿ ಚರ್ಚೆ ನಡೆಯುವ ಸಂದರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿ ಈ ವಿಷಯ ಪ್ರಸ್ತಾಪಿಸಿದರು. ಮಾತ್ರವಲ್ಲ ಲೋಕಾಯುಕ್ತಕ್ಕೆ ಲಂಚ ನೀಡಿದ ಅಧಿಕಾರಿಗಳ ಪಟ್ಟಿ ತಮ್ಮ ಬಳಿ ಇದ್ದು ಸ್ಪೀಕರ್ ಅನುಮತಿ ನೀಡಿದರೆ ಅದನ್ನು ಸದನದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದರು. ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜ್ ಎನ್ನುವವರು ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳಿಗೆ ಕರೆ ಮಾಡಿ ಕಪ್ಪ ಪಡೆಯಬೇಕಾದ ಅಧಿಕಾರಿಗಳ ಪಟ್ಟಿ ನೀಡುತ್ತಾರೆ. ಅದನ್ನು ಆಧರಿಸಿ ಅಲ್ಲಿಂದ ಕರೆ ಬರುತ್ತದೆ. ಆ ನಂತರ ಅಧಿಕಾರಿಗಳು ಲಂಚ ಕೊಟ್ಟು ಬಂದಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್ ಕುಮಾರ್, ಇಂಥ ವಿಚಾರಗಳ ಬಗ್ಗೆ ಚರ್ಚೆ ನಡೆಸುವಾಗ ಗಾಂಭೀರ್ಯ ಇರಬೇಕು. ದಂಡ ಸಂಹಿತೆ ಪ್ರಕಾರ ಲಂಚ ಕೊಡುವುದು ಕೂಡ ಅಪರಾಧ. ನೀವು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿರುವುದರಿಂದ ಹೆಸರನ್ನು ಬಹಿರಂಗಪಡಿಸಲೇಬೇಕು. ಜತೆಗೆ ಸಿದ್ದಾಮಯ್ಯ ಅವರು ತಕ್ಷಣವೇ ಲಂಚ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನ್ಯಾಯಿಕ ಸಂಸ್ಥೆ ಕಾರ್ಯವಿಧಾನದ ಬಗ್ಗೆ ಪುರಾವೆ ಇಲ್ಲದೇ ಆರೋಪ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರಿಗೆ ಹೆಸರು ಹೇಳುವುದಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನ ಶಾಸಕ ಅಪ್ಪಾಜಿ ನಾಡಗೌಡ ಮನವಿ ಮಾಡಿದರು. ಆದರೂ ಪಟ್ಟು ಬಿಡದ ಕುಮಾರಸ್ವಾಮಿ, ತಮ್ಮ ಬಳಿ ಸಾಕಷ್ಟು ಪುರಾವೆ ಇದೆ ಎಂದರು.

ಸರ್ಕಾರದ ವಿರುದ್ಧ ಆರೋಪ ಮಾಡಿ ಸುಮ್ಮನಾಗಲು ಸಾಧ್ಯವಿಲ್ಲ. ಲಂಚ ಪಡೆದ ಅಥವಾ ಕೊಟ್ಟ ವ್ಯಕ್ತಿ ಐಎಎಸ್ ಅಧಿಕಾರಿಯಾಗಿರಲಿ  ಡಿ ದರ್ಜೆ ನೌಕರನಾಗಿರಲಿ ಅವನ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಲೇ ಬೇಕು ಎಂದು ರಮೇಶ್ ಕುಮಾರ್ ಒತಾಯ ಮಾಡಿದ್ದರಿಂದ ಗೊಂದಲ ಉಂಟಾಯಿತು.  ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ   ಸದಸ್ಯರಿಗೆ ಲಂಚ ನೀಡಿದ ಅಧಿಕಾರಿಗಳ ಹೆಸರನ್ನು ತಿಳಿದುಕೊಳ್ಳುವ ಹಕ್ಕು ಇದೆ. ಹೀಗಾಗಿ ನಿಮ್ಮ ಬಳಿ ಇರುವ ಅಧಿಕಾರಿಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕಳಿಸಿಕೊಡಿ. ಪರಿಶೀಲಿಸಿ ಸದನಕ್ಕೆ ವರದಿ ನೀಡಲಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com