

ಬೆಂಗಳೂರು: ಉದಯೋನ್ಮುಖ ಚಿತ್ರನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುತ್ತಿಗೆದಾರನೊಬ್ಬನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಜಯನಗರ ನಿವಾಸಿ ಪ್ರಶಾಂತ್ ಬಂಧಿತ ಆರೋಪಿ.
ಸದ್ಯ ನಿರ್ಮಾಣವಾಗುತ್ತಿರುವ ಡ್ರೆಸ್ ಕೋಡ್ ಎಂಬ ಚಿತ್ರದಲ್ಲಿ ನಟಿಸುತ್ತಿರುವ ನಟಿ, ಶನಿವಾರ ರಾತ್ರಿ ತಮ್ಮ ಸ್ನೇಹಿತರ ಜತೆ ರೆಸಿಡೆನ್ಸಿ ರಸ್ತೆಯಲ್ಲಿನ ಪಬ್ ವೊಂದಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಪ್ರಶಾಂತ್, ಸ್ನೇಹಿತರ ಜತೆ ಸೇರಿ ಗುಂಪುಗೂಡಿ ಮೈಮುಟ್ಟಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾನೆಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಕಲಂ ಅನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾನ್ಸರಿ ಪೆವಿಲಿಯನ್ ಪಬ್ ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಡ್ಯಾನ್ಸ್ ಮಾಡುತ್ತಿದ್ದಾಗ ಹತ್ತಿರ ಬಂದ ಪ್ರಶಾಂತ್, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಎಚ್ಚರಿಕೆ ನೀಡಿದರೂ ಮುಂದುವರಿಸಿದ್ದ ಎಂದು ನಟಿ ದೂರಿನಲ್ಲಿ ಹೇಳಿದ್ದಾರೆ.