

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದಲ್ಲಿ ಲೋಕಾಯುಕ್ತರ ಪುತ್ರನೇ ಭಾಗಿಯಾಗಿರುವ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ವಿಧಾನಮಂಡಲಕ್ಕೆ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಅಧಿಕಾರ ಕೊಡಲು ಮುಂದಾಗಿದೆ.ಈ ಸಂಬಂಧದ ತಿದ್ದುಪಡಿ ವಿಧೇಯಕ ಗುರುವಾರ ಮತ್ತು ಶುಕ್ರವಾರ ಅಧಿವೇಶನದಲ್ಲಿ ಚರ್ಚೆಯಾಗಲಿದೆ.
ಮಳೆಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಬಜೆಟ್ ಅನುಮೋದಿಸಿದೆ. ಇನ್ನು ಲೋಕಾಯುಕ್ತ ವಿಧೇಯಕ ಸೇರಿದಂತೆ ಕಂದಾಯ ಇಲಾಖೆಯ ವಿಧೇಯಕಗಳ ತಿದ್ದುಪಡಿಗೆ ಅನುಮೋದನೆ ಪಡೆದುಕೊಳ್ಳಲೆಂದೇ ಎರಡು ದಿನಗಳ ಅಧಿವೇಶನವನ್ನು ಮುಂದುವರಿಸಿದೆ.
ಈ ಮಧ್ಯೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಸಂತಾಪ ಸೂಚಿಸುವ ವಿಷಯ ಸೇರ್ಪಡೆಯಾಗಿದೆ. ಗುರುವಾರ ಬೆಳಗ್ಗೆ ಕಲಾಪ ಆರಂಭವಾದ ನಂತರ ಕಲಾಂ ಅವರಿಗೆ ಸಂತಾಪ ಸೂಚಿಸಲಾಗುತ್ತದೆ. ನಂತರ ಲೋಕಾಯುಕ್ತ ವಿಧೇಯಕದ ಚರ್ಚೆ ಆರಂಭವಾಗುತ್ತದೆ.
ಲೋಕಾಯುಕ್ತಕ್ಕೆ ಎಲ್ಲ ರೀತಿಯ ಅಧಿಕಾರಗಳನ್ನೂ ತೆಗೆದುಹಾಕಿ, ಒಂದು ರೀತಿಯ ಸರ್ಕಾರದ ಅಧಿವೇಶನದ ತನಿಖಾ ಸಂಸ್ಥೆಯಂತೆ ಮಾಡುವ ರೀತಿಯಲ್ಲಿ ಸರ್ಕಾರ ವಿಧೇಯಕವನ್ನು ಈ ಮೊದಲು ಮಂಡಿಸಿತ್ತು. ಈ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ವ್ಯಾಪಕ ಪ್ರತಿರೋಧ ವ್ಯಕ್ತವಾದ್ದರಿಂದ, ಲೋಕಾಯುಕ್ತ ನೇಮಕ, ಪದಚ್ಯುತಿ ಹಾಗೂ ಹೊಣೆಗಾರಿಕೆ ಬಗ್ಗೆ ಮಾತ್ರ ತಿದ್ದುಪಡಿ ಮಾಡಿ ವಿಧೇಯಕ ಮಂಡಿಸಲಾಗಿದೆ. ಈಗ ಎರಡು ದಿನ ನಡೆಯುವ ಚರ್ಚೆಯಲ್ಲಿ ಯಾವ ರೀತಿಯ ಸಲಹೆ ಬರುತ್ತವೆ, ಅದನ್ನು ಸರ್ಕಾರ ಹೇಗೆ ತಿದ್ದುಪಡಿಯಲ್ಲಿ ಅಳವಡಿಸಿ ಮುಂದುವರಿಯುತ್ತದೆ ಎಂಬುದು ಕುತೂಹಲಕರ.
ಈಗಿರುವ ತಿದ್ದುಪಡಿಯೇನು?: ಲೋಕಾಯುಕ್ತ ಹುದ್ದೆಗೆ ನೇಮಕಗೊಳ್ಳುವ ವ್ಯಕ್ತಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಥವಾ ಹೈಕೋರ್ಟ ನ್ಯಾಯಮೂರ್ತಿಯಾಗಿ ಹತ್ತು ವರ್ಷ ಕರ್ತವ್ಯ ನಿರ್ವಹಣೆ ಮಾಡಿರಬೇಕು. ಉಪಲೋಕಾಯುಕ್ತರಾಗಿ ನೇಮಕಗೊಳ್ಳುವವರು ಐದು ವರ್ಷ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರಬೇಕು.
ಲೋಕಾಯುಕ್ತ ಅಥವಾ ಉಪಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣಯಕ್ಕೆ ರಾಜ್ಯ ವಿಧಾನಮಂಡಲದಲ್ಲಿ ಅಂಗೀಕಾರ ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದಂತೆ ತಡೆಯಲು ಈ ವಿಧೇಯಕದಲ್ಲಿ ಅವಕಾಶವಿದೆ.ವಿಧಾನಸಭೆ ಮತ್ತು ವಿಧಾನಪರಿಷತ್ ಸರಳ ಬಹುಮತದೊಂದಿಗೆ ಲೋಕಾಯುಕ್ತರ ಪದಚ್ಯುತಿಗೆ ತೆಗೆದುಕೊಂಡ ನಿರ್ಣಯಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಲೋಕಾಯುಕ್ತ,ಉಪಲೋಕಾಯುಕ್ತರ ಪದಚ್ಯುತಿ ಮಾಡಬಹುದು.
ಪದಚ್ಯುತಿ ನಿರ್ಣಯ ಕಡ್ಡಾಯವಾಗಿ ಲಿಖಿತವಾಗಿರಬೇಕು. ವಿಧಾನಸಭೆ ಹಾಗೂ ವಿಧಾನಪರಿಷತ್ ಒಟ್ಟು ಸಂಖ್ಯಾಬಲದ ಮೂರನೇ ಒಂದರಷ್ಟು ಸದಸ್ಯರು ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸಭಾಧ್ಯಕ್ಷ/ಸಭಾಪತಿಗಳಿಗೆ ಸಲ್ಲಿಸುವುದರೊಂದಿಗೆ ಈ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮೇಲ್ನೋಟಕ್ಕೆ ಆರೋಪ,ಅಸಾಮರ್ಥ್ಯ ಇರುವುದು ಕಂಡುಬಂದರೆ ಈ ಬಗ್ಗೆ ತನಿಖೆ ನಡೆಸುವುದಕ್ಕೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗೆ ಶಿಫಾರಸು ಮಾಡಬಹುದು. ಅಲ್ಲಿಂದ ಮುಂದೆ ನ್ಯಾಯಾಧೀಶರ ವಿಚಾರಣೆ ಕಾಯಿದೆ ಮಾದರಿಯಲ್ಲೇ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ವಿಚಾರಣೆ ನಡೆಯುತ್ತದೆ.
ಪ್ರತಿ ವರ್ಷ ಅಕ್ಟೋಬರ್ 31ರೊಳಗಾಗಿ ಸಂಸ್ಥೆಯ ವ್ಯವಹಾರಗಳ ಸಂಬಂಧ ಸರ್ಕಾರಕ್ಕೆ ವಾರ್ಷಿಕ ವರದಿಯನ್ನು ನೀಡಬೇಕು.
ಮುಕ್ತ ಚರ್ಚೆಯೇ ಸರ್ಕಾರದ ಉದ್ದೇಶ, ಜಯಚಂದ್ರ: ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಈ ಸಂಬಂಧ ಗುರುವಾರ ಮತ್ತು ಶುಕ್ರವಾರ ಎರಡೂ ಸದನದಲ್ಲಿ ಚರ್ಚೆ ನಡೆಯಲಿದೆ. ಸದಸ್ಯರ ಸಲಹೆ ಮೇರೆಗೆ ಇನ್ನಷ್ಟು ತಿದ್ದುಪಡಿ ಮಾಡಬೇಕೆಂದರೆ ಅದನ್ನು ಸರ್ಕಾರ ಪರಿಶೀಲಿಸುತ್ತದೆ. ಈ ಬಗ್ಗೆ ಮುಕ್ತ ಚರ್ಚೆ ಆಗಲಿ ಎಂಬುದೇ ಸರ್ಕಾರದ ಉದ್ದೇಶ. ಹಿಂದಿನ ಕಾಯಿದೆಯ ಅಂಶಗಳೇ ಇದ್ದು, ನೇಮಕ, ಪದಚ್ಯುತಿ ಹಾಗೂ ಹೊಣೆಗಾರಿಕೆಯ ವಿಷಯಗಳ ಬಗ್ಗೆ ಮಾತ್ರ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
1988ರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಈವರೆಗಿರುವ ಎಲ್ಲ ಕಾಯಿದೆಗಳಿಗಿಂತ ಬಲಿಷ್ಠ.1984ರಲ್ಲಿ ಜಾರಿಗೆ ಬಂದ ಲೋಕಾಯುಕ್ತ ಕಾಯಿದೆಗಿಂತ ಬಲಶಾಲಿ. ಲೋಕಾಯುಕ್ತ ಸಂಸ್ಥೆ ಈ ಎರಡೂ ಕಾಯಿದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಿರಂದ ಕೆಲವುb ಗೊಂದಲಗಳಿರುವುದು ಸಹಜ. ಈ ಬಗ್ಗೆ ಯಾವ ರೀತಿಯ ಸಲಹೆ ಬರುತ್ತವೆ ನೋಡಬೇಕು. ಸಾರ್ವಜನಿಕರು ಪ್ರತಿಕ್ರಿಯೆಯೂ ಪ್ರಮುಖ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.
ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಎಸ್‍ಐಟಿಗೆ ವಹಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಇದೀಗ ಪ್ರಯೋಜನ ಅರಿವಾಯಿತಲ್ಲವೇ? ಎಂದು ಪ್ರಶ್ನಿಸಿದರು. ಬಿಬಿಎಂಪಿ ವಿಭಜನೆಯ ವಿಧೇಯಕವನ್ನು ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಯವರಿಗೆ ಕಳುಹಿಸಿದ್ದಾರೆ. ಸುಮಾರು 15ರಿಂದ À 20 ಅಂಶಗಳನ್ನು ಅದರಲ್ಲಿ ನಮೂದಿಸಿದ್ದಾರೆ. ಸಂವಿಧಾನದ 200 ವಿಧಿ ಪ್ರಕಾರ ರಾಷ್ಟ್ರಪತಿಯವರಿಗೆ ಇದನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಾವು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ನಂತರ ಮುಂದಿನ ಹೆಜ್ಜೆ ಇರಿಸುತ್ತೇವೆ ಎಂದರು.