

ಬೆಂಗಳೂರು: ಬಾಣಸವಾಡಿ ಕೆರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ತಹಸೀಲ್ದಾರ್ ನೀಡಿರುವ ನೋಟಿಸ್ ಕೇವಲ ನೋಟಿಸ್ ಆಗಿ ಪರಿಗಣಿಸಬೇಕೆ ಹೊರತು ತೆರವುಗೊಳಿಸುವಂತೆ ನೀಡಿರುವ ಆದೇಶವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬಾಣಸವಾಡಿ ಕೆರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಅನಧಿಕೃತ ಒತ್ತುವರಿಯನ್ನು 2015, ಜ.5ರೊಳಗಾಗಿ ತೆರವುಗೊಳಿಸಿ, ಜಮೀನನ್ನು ಸರ್ಕಾರದ ವಶಕ್ಕೆ ನೀಡಬೇಕು. ಅದು ತಪ್ಪಿದ್ದಲ್ಲಿ ಒತ್ತುವರಿ ತೆರವುಗೊಳಿಸುವ ಕ್ರಮಕ್ಕೆ ತಗಲುವ ವೆಚ್ಚವನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡಬೇಕಾಗುತ್ತದೆ. ಮಾತ್ರವಲ್ಲದೇ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅನ್ವಯ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತಹಸೀಲ್ದಾರ್ 2014, ಡಿ.29ರಂದು ನೋಟಿಸ್ ನೀಡಿದ್ದರು.
ಇದನ್ನು ಪ್ರಶ್ನಿಸಿ ಸ್ಥಳೀಯರಾದ ಬಾಲಚಂದ್ರನ್ ಸೇರಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಅಶೋಕ್ ಬಿ ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ತಹಸೀಲ್ದಾರ್
ನೀಡಿರುವ ನೋಟಿಸ್‍ಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಬೇಕು. ಆಕ್ಷೇಪಣೆಯಲ್ಲಿನ ಅಂಶವನ್ನು ಕೂಲಂಕುಷವಾಗಿ ಪರಿಗಣಿಸಿ ನಂತರ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿ ದಿಢೀರ್ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ವಸತಿ ನಿವೇಶನಗಳನ್ನು ತೆರವುಗೊಳಿಸದಂತೆ ಸರ್ಕಾರ ತೀರ್ಮಾನಿಸಿದೆ. ಒತ್ತುವರಿ ಕುರಿತು ಸಮಗ್ರ ನೀತಿ ಹಾಗೂ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರ ಸಮಿತಿ ರಚಿಸಿರುವುದಾಗಿ ಪೀಠದ ಗಮನಕ್ಕೆ ತಂದರು. ಸ್ರಕಾರಿ ವಕೀಲರ ವಾದ ಪರಿಗಣಿಸಿದ ಏಕಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ನೀತಿ ಹಾಗೂ ಕ್ರಿಯಾ ಯೋಜನೆ ರೂಪಿಸುವ ಕುರಿತು ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು. ಕೆರೆ ಜಾಗ ಪುನಃ ಸ್ಥಾಪಿಬೇಕಾದಲ್ಲಿ ಬಿಡಿಎ ನಿವೇಶನ ಮತ್ತು ಖಾಸಗಿ ನಿವೇಶನದಲ್ಲಿ ಎಂದು ತಾರತಮ್ಯ ಮಾಡಬಾರದು. ಎಲ್ಲಿರಿಗೂ ಒಂದೇ ಬಗೆಯ ಕಾನೂನು ಅನ್ವಯವಾಗಲಿದ್ದು ತಾರತಮ್ಯ ರಹಿತವಾಗಿ ಸರ್ಕಾರ ನಡೆದುಕೊಳ್ಳಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.