

ಬೆಳಗಾವಿ: ಕಳೆದ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತವು ದಿನದ ಭತ್ಯೆ ಪಡೆದ ಸಚಿವರ ರಾತ್ರಿಭೋಜನದ ವೆಚ್ಚವನ್ನೂ ಭರಿಸಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ನಡೆದ 10 ದಿನದಲ್ಲಿ ಜವಳಿ ಸಚಿವ ಬಾಬೂರಾವ್ ಚಿಂಚನಸೂರ ಅವರು ರಾತ್ರಿ ಊಟಕ್ಕೆ ರು. 52,638, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ರು.41,625, ಅರಣ್ಯ ಸಚಿವ ರಮಾನಾಥ ರೈ ರು.31,888 ವೆಚ್ಚ ಮಾಡಿ ಅಗ್ರ ಸ್ಥಾನಗಳಳ್ಲಿದ್ದಾರೆ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ರಾತ್ರಿ ಭೋಜನಕ್ಕೆ ಕೇವಲ ರು.908 ವೆಚ್ಚ ಮಾಡಿದ್ದಾರೆ. ಸಚಿವರು, ಗಣ್ಯರಿಗೆ ಕಾಯ್ದಿರಿಸಲಾಗಿದ್ದ ಕೊಠಡಿಗಳಲ್ಲಿ ವಾಸ್ತವ್ಯ ಮಾಡಿ ಊಟೋಪಚಾರದ ವೆಚ್ಚವನ್ನು ತಮ್ಮ ಜೇಬಿನಿಂದ ಭರಿಸದೇ ಅದನ್ನು ಅಧಿವೇಶನ ಲೆಕ್ಕಕ್ಕೆ ಅಧಿಕಾರಿಗಳು ಸೇರಿಸಿದ್ದಾರೆ ಎಂದು ಆರೋಪಿಸಿದರು.
ಡಿ.8ರಿಂದ 21ರವರೆಗೆ ನಡೆದ ಅಧಿವೇಶನದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳಿಗೆ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಸುವರ್ಣ ವಿಧಾನಸೌಧದಲ್ಲಿ ಮಾಡಲಾಗಿತ್ತು. ರಾತ್ರಿ ಊಟದ ಬದಲಾಗಿ ಅವರಿಗಾ ದಿನದ ಭತ್ಯೆಯನ್ನು ನೀಡಲಾಗಿತ್ತು. ದಿನದ ಭತ್ಯೆ ಪಡೆದಿದ್ದರೂ ಕೆಲವು ಸಚಿವರು ತಾವು ವಾಸ್ತವ್ಯ ಹೂಡಿದ್ದ ಹೊಟೆಲ್‍ಗಳಲ್ಲೇ ರಾತ್ರಿ ಭೋಜನ ಮಾಡಿದ್ದಾರೆ. ಆ ವೆಚ್ಚವನ್ನೂ ಜಿಲ್ಲಾಡಳಿತವೇ ಪಾವತಿಸಿದೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಉಪಲೋಕಾಯುಕ್ತ ಸುಭಾಷ ಆಡಿ ಅವರು ಅಧಿವೇಶನ ವೇಳೆಯಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಅಧಿವೇಶನಕ್ಕೂ, ಅವರ ಭೇಟಿಗೂ ಸಂಬಂಧ ಇರದಿದ್ದರೂ ಅವರ ವಾಸ್ತವ್ಯದ ವೆಚ್ಚವನ್ನೂ ಅಧಿವೇಶನದ ಖಾತೆಗೆ ಸೇರಿಸಲಾಗಿದೆ ಎಂದರು.