ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿರುಚಲು ಯತ್ನಿಸಿದ್ದ ನೆಹರು: ಎಸ್.ಎಲ್.ಭೈರಪ್ಪ

ದೇಶ ಸ್ವಾತಂತ್ರ್ಯ ಪಡೆದ ಇತಿಹಾಸವನ್ನು ತಿರುಚುವ ಕೆಲಸ ನೆಹರು ಅವರಿಂದ ನಡೆದಿತ್ತು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದರು...
ಸಾಹಿತಿ ಎಸ್.ಎಲ್.ಭೈರಪ್ಪ
ಸಾಹಿತಿ ಎಸ್.ಎಲ್.ಭೈರಪ್ಪ
Updated on: 

ಚಿಕ್ಕಮಗಳೂರು: ದೇಶ ಸ್ವಾತಂತ್ರ್ಯ ಪಡೆದ ಇತಿಹಾಸವನ್ನು ತಿರುಚುವ ಕೆಲಸ ನೆಹರು ಅವರಿಂದ ನಡೆದಿತ್ತು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದರು.

ಶನಿವಾರ ಸಂಜೆ ಕುವೆಂಪು ಕಲ್ಚರಲ್ ಎಜುಕೇಷನ್ ಟ್ರಸ್ಟ್ ಏರ್ಪಡಿಸಿದ್ದ ಮಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೆಹರು ಅವರು ಹಿಸ್ಟರಿ ಫ್ರೀಡಂ ಆಫ್ ಇಂಡಿಯಾ ಎಂಬ ಪುಸ್ತಕವನ್ನು ಆರ್.ಸಿ.ನಜೂಮ್ ದಾರ್ ಅವರಿಂದ ಬರೆಸಲು ಮುಂದಾಗಿದ್ದರು. ಅದರಲ್ಲಿ ಇತಿಹಾಸ ತಿರುಚುವ ಯತ್ನ ನಡೆದಿತ್ತು. ಆದರೆ, ಅದಕ್ಕೆ ನಜೂಮ್ ದಾರ್ ಅವರು ಒಪ್ಪಲಿಲ್ಲ. ಯಾವುದೇ ಗ್ರಂಥ ಬರೆಯಬೇಕಾದರೆ, ಸಂಶೋಧನೆಯಾಗಬೇಕು ಎಂದು ನಜೂಮ್ ಧಾರ್ ಹೇಳಿದಾಗ ಅವರನ್ನು ಕೈಬಿಟ್ಟು ತಾರಾಚಂದ್ ಅವರಿಂದ ನೆಹರು ಅವರು ಈ ಪುಸ್ತಕವನ್ನು ಬರೆಸಿದರು ಎಂದರು.

ಬಂಗಾಳದಲ್ಲಿ 1890ರ ಆಸುಪಾಸಿನಲ್ಲಿ ಸ್ವಾಮಿ ವಿವೇಕಾನಂದರು ಅಹಿಂಸೆಯ ಬಗ್ಗೆ ಮಾತನಾಡಿದ್ದರು. ಸ್ವದೇಶಿ ಚಳವಳಿ ಆರಂಭವಾಗಿದ್ದೇ ಅಲ್ಲಿಂದ ಎಂದ ಭೈರಪ್ಪ ಅವರು, ಸುಭಾಷ್ ಚಂದ್ರ ಬೋಸ್ ಇಲ್ಲದೆ ಹೋಗಿದ್ದರೆ ಈ ದೇಶಕ್ಕೆ ಸ್ವಾತಂತ್ರ್ಯ ಬರುತ್ತಿರಲಿಲ್ಲ ಎಂದರು.

ಕಮ್ಯುನಿಜಂ ಬಗ್ಗೆ ನೆಹರು ಅವರು ತುಂಬಾ ಪ್ರತಿಪಾದನೆ ಮಾಡುತ್ತಿದ್ದರು, ಅದನ್ನು ಒಪ್ಪಿಕೊಂಡಿದ್ದರು. ಇದರ ಹಿಂದಿದ್ದ ಅವರ ಉದ್ದೇಶವೇ ಬೇರೆಯಾಗಿತ್ತು. ಇದನ್ನು ಹೊರಗೆ ವ್ಯಕ್ತಪಡಿಸಿದರೆ ಬೇರೆ ದೇಶದವರು ತಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದರು. ಈ ರೀತಿಯ ಭ್ರಮೆ ನಮ್ಮ ನಾಯಕರಲ್ಲಿತ್ತು ಎಂದು ಹೇಳಿದರು. ಸಾಹಿತ್ಯವನ್ನು ಅಧ್ಯಯನ ಮಾಡಿ ಸಾಹಿತ್ಯಕ್ಕೆ ಬಂದವನಲ್ಲ ನಾನು, ತತ್ವಶಾಸ್ತ್ರವನ್ನು ಅಧ್ಯಯನ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಬಂದೆ. ಪಾಶ್ಚಿತ್ಯ ತತ್ವಶಾಸ್ತ್ರಕ್ಕೂ, ನಮ್ಮ ದೇಶದ ತತ್ವಶಾಸ್ತ್ರಕ್ಕೂ ಬಹಳಷ್ಟು ವ್ಯತ್ಯಾಸವಿದೆ.

ಪಾಶ್ಚಿತ್ಯ ತತ್ವಶಾಸ್ತ್ರ ಚಿಂತನೆಯನ್ನು ಹುಟ್ಟು ಹಾಕುತ್ತದೆ. ಬಾಹ್ಯ ಜಗತ್ತನ್ನು ತಿಳಿಸಿ ಕೊಡುತ್ತದೆ. ಭಾರತೀಯ ತತ್ವಶಾಸ್ತ್ರಕ್ಕೆ ವೇದಗಳೇ ಆಧಾರ. ಅವುಗಳು ಜೀವನದ ಸಮಸ್ಯೆ, ನಿಗೂಢತೆಯ ಬಗ್ಗೆ ತಿಳಿಸಿಕೊಡುತ್ತದೆ. ವೇದದ ಸಾರ ಅರ್ಥವಾಗುವುದಿಲ್ಲ, ಆದರೂ ವೇದದ ಸಾರ ಎಲ್ಲರಿಗೂ ಮುಟ್ಟಿದೆ. ಅದು, ರಾಮಾಯಣ ಮತ್ತು ಮಹಾಭಾರತದ ಮೂಲಕ ಎಂದ ಭೈರಪ್ಪ ಅವರು, ಭಗವದ್ಗೀತೆ ಇಂದಿಗೂ ಪ್ರಸ್ತುತ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com