'ಕಾವೇರಿ ಉರುಳು ಕೊರಳಿಗೆ ಹಾಕಲಾಗಿದೆ': ದೇವೇಗೌಡ

ಕಾವೇರಿ ವಿಚಾರದಲ್ಲಿ ರಾಜ್ಯದ ಜನತೆಯ ಕೊರಳಿಗೆ ಹಗ್ಗ ಹಾಕಲಾಗಿದ್ದು ಅದನ್ನು ಎಳೆಯುವ ಕೆಲಸವಷ್ಟೇ ಬಾಕಿ ಇದೆ- ಹೆಚ್.ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
Updated on: 

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯದ ಜನತೆಯ ಕೊರಳಿಗೆ ಹಗ್ಗ ಹಾಕಲಾಗಿದ್ದು ಅದನ್ನು ಎಳೆಯುವ ಕೆಲಸವಷ್ಟೇ ಬಾಕಿ ಇದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಜನಶಕ್ತಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಎಸ್.ವಿ ಜಯಶೀಲರಾವ್ ಅವರಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಸದ್ಯ ಬೆಂಗಳೂರಿಗೆ 11 ಟಿಎಂಸಿ ನೀರು ದೊರೆಯುತ್ತಿದೆ. ಕಾವೇರಿ ನೀರು ನಗರದ 3 /2  ರಷ್ಟು ಜನರಿಗೆ ಮಾತ್ರ ಎಂದು ಮೂವರು ಮಂದಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ. ಈ ಕುರಿತು ರಾಜಕಾರಣಿಗಳು ಹಾಗೂ ಜನರು ಎಚ್ಚೆತ್ತುಕೊಂಡಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ನಗರದ ನೀರಿನ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಂಬಾಡಿ ನಿರ್ಮಾಣ ಸಂದರ್ಭದಲ್ಲಿ ಮಾಡಿದ್ದ ಅಂತಾರಾಜ್ಯ ಒಪ್ಪಂದ ರಾಜ್ಯಕ್ಕೆ ಪೂರಕವಾಗಿಲ್ಲ. ಈ ಕುರಿತು ನೀರಾವರಿ ತಜ್ಞರ ಸಹಯೋಗದೊಂದಿಗೆ ಗೋಪಾಲಗೌಡರು ಅಧ್ಯಯನ ಮಾಡಿದ್ದರು. ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ ಎಂಬುದು ಗೊತ್ತಾದರೆ ಕಠೋರವಾದ ಮಾತುಗಳನ್ನಾಡುತ್ತಿದ್ದರು. ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ತೊಡೆಗಳನ್ನು ಸೀಳಿ ತೋರಣ ಕಟ್ಟುವ ಎಚ್ಚರಿಕೆ ನೀಡಿದ್ದರು ಎಂದು ದೇವೇಗೌಡರು ಸ್ಮರಿಸಿದರು.  
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಹಿರಿಯ ಪತ್ರಕರ್ತ ಜಯಶೀಲರಾವ್ ಸದನ ಸಮೀಕ್ಷೆ ಕುರಿತು ಬರೆಯುತ್ತಿದ್ದದ್ದು ಮಾದರಿ. ಯಾರನ್ನೂ ಬೈಯದೆ ವಾಸ್ತವ ಚಿತ್ರಣ ನೀಡುತ್ತಿದ್ದರು. ಅವರಿಗೆ ಗೋಪಾಲ ಗೌಡರ ಪ್ರಶಸ್ತಿ ಸಿಕ್ಕಿರುವುದು ಶ್ಲಾಘನೀಯ ಎಂದರು. ಸ್ವಾತಂತ್ರ್ಯಾ ನಂತರ 7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.1999 - 2005 ವರೆಗೆ 1 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ. ಕೃಷಿ ಪ್ರಧಾನ ದೇಶವನ್ನು ಉದ್ಯಮ ಪ್ರಧಾನ ದೇಶವನ್ನಾಗಿ ಮಾಡಲು ಹೊರಟಿರುವುದೇ ಈ ದುರಂತಗಳಿಗೆ ಕಾರಣ ಎಂದು ವಿಶ್ಲೇಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com