ಸರಸ್ವತಿ ಸಮ್ಮಾನ್ ವ್ಯಕ್ತಿಗಲ್ಲ, ಕನ್ನಡಕ್ಕೆ ಸಂದ ಗೌರವ

ಸಂಸದ ಎಂ.ವೀರಪ್ಪ ಮೊಯ್ಲಿ ಅವರ `ರಾಮಾಯಣ ಮಹಾನ್ವೇಷಣಂ' ಮಹಾಕಾವ್ಯಕ್ಕೆ ಸರಸ್ವತಿ ಸಮ್ಮಾನ್ ಬಂದಿರುವುದಕ್ಕೆ
ಎಂ ವೀರಪ್ಪ ಮೊಯ್ಲಿ
ಎಂ ವೀರಪ್ಪ ಮೊಯ್ಲಿ
Updated on: 

ಬೆಂಗಳೂರು: ಸಂಸದ ಎಂ.ವೀರಪ್ಪ ಮೊಯ್ಲಿ ಅವರ `ರಾಮಾಯಣ ಮಹಾನ್ವೇಷಣಂ' ಮಹಾಕಾವ್ಯಕ್ಕೆ ಸರಸ್ವತಿ ಸಮ್ಮಾನ್ ಬಂದಿರುವುದಕ್ಕೆ ಸಾಹಿತ್ಯ ವಲಯದಲ್ಲಿನ ಅಸಮಾಧಾನ ಬಹಿರಂಗವಾಗುತ್ತಿದೆ. ಕೆಲವರಂತೂ `ಇದು ಅರಸಿ ಬಂದಿದ್ದಲ್ಲ, ಅಧಿಕಾರ ಬಳಸಿ ಪಡೆದದ್ದು' ಎಂದು ನೇರವಾಗಿಯೇ ಹೇಳಿದ್ದಾರೆ. ಅಲ್ಲದೆ ತಾವು ಈ ಕೃತಿ ಓದಿಲ್ಲ ಎನ್ನುವುದನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಸರಸ್ವತಿ ಸಮ್ಮಾನ್ ಕನ್ನಡಕ್ಕೆ ಸಿಕ್ಕಿರೋದು 2ನೇ ಬಾರಿ. ರಾಮಾಯಣ ಕುರಿತು ಕುವೆಂಪು ಬರೆದರು, ವೀರಪ್ಪಮೊಯ್ಲಿ ಆಧುನಿಕ ಕಾಲಕ್ಕೆ ಸಲ್ಲುವ ಹಾಗೆ ರಾಮಾಯಣ ಬರೆದರು. ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಔಚಿತ್ಯ ಪೂರ್ಣ. ಇದು ಆಧುನಿಕ ಚಿಂತನೆಗೆ ಸಿಕ್ಕಿದ ಪ್ರಶಸ್ತಿ, ವ್ಯಕ್ತಿಗೆ ಬಂದದ್ದಕ್ಕೀತ ಹೆಚ್ಚಾಗಿ, ತತ್ವ ಮತ್ತು ಕನ್ನಡಕ್ಕೆ ಸಂದಿರೋದು ಸಂತೋಷ. ಈ ಕೃತಿಯಲ್ಲಿ ಅಯೋಧ್ಯೆ, ಲಂಕೆ, ಕಿಷ್ಕಿಂದೆ ಎನ್ನುವ ಸಂಸ್ಕೃತಿಯ ಮುಖಾಮುಖಿ, ಸಂಘರ್ಷ, ಸಮನ್ವಯ ಆಗುತ್ತದೆ, ಆ ಮೂಲಕ ಈಗಿನ ಭಾರತಕ್ಕೆ ಸಮನ್ವಯ, ಆದರ್ಶ ಬೇಕು ಎಂಬುದನ್ನು ಹೇಳಿದ್ದಾರೆ.
- ಪ್ರೋ.ಬಿ.ಎ.ವಿವೇಕ್ ರೈ
ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ

ವೀರಪ್ಪ ಮೊಯ್ಲಿ ಅವರ ರಾಮಾಯಣ ಮಹಾನ್ವೇಷಣಂ ಕಾವ್ಯವನ್ನು ಬಹುತೇಕರು ಓದಿರಲಿಕ್ಕಿಲ್ಲ. ಆದರೆ, ಅದು ಪ್ರಸ್ತುತ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇದಕ್ಕೆ ಶ್ರೇಷ್ಠ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಿರುವುದು ಸಂತೋಷ.
- ವಿಠ್ಠಪ್ಪ ಗೋರಂಟ್ಲಿ, ಸಾಹಿತಿ, ಕೊಪ್ಪಳ

ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ದೊರಕಿದ್ದಲ್ಲ, ಪಡೆದುಕೊಂಡಿದ್ದು. ಅವರ ಕೃತಿ `ರಾಮಾಯಣ ಮಹಾನ್ವೇಷಣಂನ್ನು ನಾನು ಓದಿಲ್ಲ, ಓದಬೇಕು ಎಂದೆನಿಸಲೂ ಇಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಇರುವವರು ಸಾಹಿತಿಗಳಲ್ಲ, ರಾಜಕಾರಣಿಗಳು. ಮೊಯ್ಲಿ ಅವರ ರಾಜಕೀಯ ಪ್ರಭಾವ ಅವರಿಗೆ ಈ ಪ್ರಶಸ್ತಿ ತಂದುಕೊಟ್ಟಿದೆ. ಅವರಿಗಿಂತ ಉತ್ತಮ ಕವಿಗಳು, ಸಾಹಿತಿಗಳಿಗೆ ನಮ್ಮಲ್ಲಿ ಕೊರತೆ ಇಲ್ಲ.
- ಎಂ.ಕೆ. ನಾಯ್ಕ ಮಾಸ್ಕೇರಿ, ಕವಿ, ದಾಂಡೇಲಿ

ನಮ್ಮೂರಿನ ಹಿರಿಯ ರಾಜಕಾರಣಿ ಮೊಯ್ಲಿ ಅವರ ಸಾಧನೆಗೆ ಸಂದ ಈ ಗೌರವಕ್ಕೆ ಅಭಿನಂದನೆ, ನಮಗೆಲ್ಲ ಹೆಮ್ಮೆ ವಿಚಾರ.
- ಡಾ. ಪ್ರಭಾಕರ ಜೋಶಿ, ವಿಮರ್ಶಕ

ವೀರಪ್ಪ ಮೊಯ್ಲಿ ಅವರ ಕಾವ್ಯ ರಾಮಾಯಣ ಮಹಾನ್ವೇಷಣಂ ಕೃತಿಯನ್ನು ನಾನು ಓದಿಲ್ಲ. ಆದರೆ, ಅವರು ರಾಜಕೀಯದಲ್ಲಿದ್ದುಕೊಂಡು ರಚನೆ ಮಾಡಿರುವುದು ಹಾಗೂ ಅದಕ್ಕೆ ಶ್ರೇಷ್ಠ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಿರುವುದು ಶ್ಲಾಘನೀಯವೇ ಸರಿ.
- ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ, ಕೊಪ್ಪಳ

ರಾಜಕೀಯ ವ್ಯಕ್ತಿಯಾಗಿ ಸಾಹಿತ್ಯ ರಚಿಸಿದ್ದು ಮೆಚ್ಚುವಂತಹುದು. ಆದರೆ ಸ್ವಂತ ಬದುಕಿನಲ್ಲಿ ತನ್ನ ಓಟು, ಸೀಟು ಮತ್ತು ನೋಟು ಉಳಿಸಿಕೊಳ್ಳಲು ಸ್ವಾರ್ಥಿಯಾಗುವುದು ಆಗ ಯುವ ಜನರ ಬದುಕು ಕಾಣುವುದಿಲ್ಲ. ಈ ದೃಷ್ಟಿಯಲ್ಲಿ ಅಂತರಂಗದಲ್ಲಿ ಒಳ್ಳೆಯತನ ಇರದೆ, ಬಹಿರಂಗದಲ್ಲಿ ಸಂಭಾವಿತ ಎಂದು ತೋರಿಸಿಕೊಡುವವರಿಗೆ ಸಿಗುವ ಸಮ್ಮಾನ್, ಪುರಸ್ಕಾರಕ್ಕೆ ಮೌಲ್ಯ ಇಲ್ಲ.
- ದಿನೇಶ್ ಹೊಳ್ಳ , ಚಿತ್ರ ಸಾಹಿತಿ, ಪರಿಸರ ಹೋರಾಟಗಾರ

ವೀರಪ್ಪ ಮೊಯ್ಲಿ ಅವರು ಬರೆದ ರಾಮಾಯಣ ಮಹಾನ್ವೇಷಣಂ ಕೃತಿ ನಾನು ಓದಿಲ್ಲ. ಕೃತಿ ಕುರಿತು ವಿಮರ್ಶಕರು ತಮ್ಮದೇ ಆದ ನೆಲೆಯಲ್ಲಿ ವ್ಯಾಖ್ಯಾನ ಮಾಡಿರುವುದನ್ನು ಅಲ್ಲಲ್ಲಿ ಓದಿದ್ದೇನೆ. ಏನೇ ಆಗಲಿ ಕನ್ನಡಕ್ಕೆ ಸರಸ್ವತಿ ಸಮ್ಮಾನ್ ಬಂದದ್ದು ಸಂತಸದ ಸಂಗತಿ. - ಸತ್ಯಾನಂದ ಪಾತ್ರೋಟ, ಬಂಡಾಯ ಕವಿ, ಬಾಗಲಕೋಟೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com