

ಬೆಂಗಳೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿನಹೊಳೆ ಯೋಜನೆಗೆ ೧೫೦೦ಕೋಟಿ ರೂಗಳ ಅನುದಾನವನ್ನು ಸೋಮವಾರ ಘೋಷಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನದ ಕೆಲವು ಭಾಗಗಳು ಹಾಗೂ ತುಮಕೂರು ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಲು ಸರ್ಕಾರ ಗಂಭೀರವಾಗಿದೆ ಎಂದಿದ್ದಾರೆ ಸಿದ್ದರಾಮಯ್ಯ. ೨೧೦೧೨-೧೩ ರಿಂದ ೨೦೧೪-೧೫ ರ ಬಜೆಟ್ ಗಳಲ್ಲಿ ಎತ್ತಿನ ಹೊಳೆ ಯೋಜನೆಯ ಬಗ್ಗೆ ಮಂಡಿಸಲಾಗಿದೆ ಮತ್ತು ಈಗಾಗಲೇ ೩೫೦ ಕೋಟಿ ರೂಗಳನ್ನು ಇದಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಕೋಲಾರದ ಅಂತರ್ಜಲ ಅಭಿವೃದ್ಧಿಗಾಗಿ, ಕೋರಮಂಗಲ-ಚಳ್ಳಘಟ್ಟದ ನೀರು ಸಂಸ್ಕರಣಾ ಕೇಂದ್ರದಿಂದ ಸಂಸ್ಕರಿಸಿದ ಕೊಳಚೆ ನೀರನ್ನು ಕೂಡ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ಮತ್ತೊಂದು ಕೊಳಚೆ ನೀರು ಸಂಸ್ಕರಣಾ ಕೇಂದ್ರವನ್ನು ಕೂಡ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.