

ಒತ್ತುವರಿ ಹಿನ್ನೆಲೆಯಲ್ಲಿ ಎನ್‍ಜಿಒ, ಕೆಲವು ಸಂಸ್ಥೆಗಳಿಂದ ಕ್ರಮಕ್ಕೆ ಆಗ್ರಹ
ಬೆಂಗಳೂರು: ನಗರದಲ್ಲಿ ಒತ್ತುವರಿಯಾಗಿರುವ 13 ಕೆರೆಗಳ ವಿರುದ್ಧ ಜಿಲ್ಲಾಡಳಿತದ ಸಮರ ಮುಂದುವರಿದಿದ್ದು, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕೆರೆ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಬಡಾವಣೆಗಳ ಮೇಲೆ ಲೋಕಾಯುಕ್ತ ಸಂಸ್ಥೆ ಕಣ್ಣು ಹಾಕಿದೆ.
ಈ ಕೆರೆಗಳನ್ನು ಒತ್ತುವರಿ ಮಾಡಿಕೊಂಡು 3500 ಸೈಟ್ ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳ ಮೌಲ್ಯವೇ ರು.10 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ತೆರವಿನ ಬಗ್ಗೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ್ದೇ ಆಗಿರುವುದರಿಂದ ಕಾರ್ಯಾಚರಣೆಯ ಬಗ್ಗೆ ಅಡ್ವೋಕೇಟ್ ಜನರಲ್ ಹಾಗೂ ಸರ್ಕಾರದಿಂದ ಸಲಹೆ ಪಡೆಯುವುದಾಗಿ ಬಿಡಿಎ ಆಯುಕ್ತರು ತಿಳಿಸಿದ್ದಾರೆ.
ಮಂಗಳವಾರ ಲೋಕಾಯುಕ್ತ ಕಚೇರಿಯಲ್ಲಿ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ನಗರ ಜಿಲ್ಲಾಧಿಕಾರಿ ವಿ.ಶಂಕರ್, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿಗಳು, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯೊಂದಿಗೆ ಚರ್ಚಿಸಿದರು. ಬುಧವಾರ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಮುಂದೂಡಲಾಗಿದ್ದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರನ್ನೂ ಸಭೆಗೆ ಕರೆಯಲಾಗಿದೆ.
ಎಲ್ಲರಿಗೂ ಒಂದೇ ನ್ಯಾಯ
ಖಾಸಗಿ ಬಡಾವಣೆ ತೆರವುಗೊಳಿಸಲಾಗಿದೆ. ಆದರೆ, ಬಿಡಿಎ ಒತ್ತುವರಿಗೆ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಾರ್ವಜನಿಕರು, ಎನ್‍ಜಿಒ ಹಾಗೂ ಇತರೆ ಸಂಸ್ಥೆಗಳು ಪ್ರಶ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಅನಿವಾರ್ಯ. ಇಷ್ಟು ಮಾತ್ರವಲ್ಲದೇ ಇತರೆ ಕೆರೆ ವ್ಯಾಪ್ತಿಯಲ್ಲಿಯೂ ಸಾಕಷ್ಟು ಕಟ್ಟಡಗಳು ನಿರ್ಮಾಣಗೊಂಡಿವೆ. ಖಾಸಗಿಯಾಗಿರಲಿ, ಸರ್ಕಾರವೇ ಆಗಿರಲಿ ಒತ್ತುವರಿಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬಹುದು ಎಂದು ಸಭೆಯಲ್ಲಿ ಉಪಲೋಕಾಯುಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ತೆರವಿಗೆ ತಡೆ
ಬೆಂಗಳೂರು: ಬಾಣಸವಾಡಿ ಕೆರೆ ಒತ್ತುವರಿ ಮಾಡಿದ ಆರೋಪ ಎದುರಿಸುತ್ತಿರುವ 25 ಕಟ್ಟಡ ತೆರವಿಗೆ ಮೇ 7ರವರೆಗೂ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಮಧ್ಯಂತರ ಆದೇಶದಿಂದ ಒತ್ತುವರಿ ತೆರವು ಆರೋಪ ಎದುರಿಸುತ್ತಿರುವ 25 ಕಟ್ಟಡ ಮಾಲೀಕರಿಗೆ 2 ದಿನಗಳ ಕಾಲ ನಿಟ್ಟುಸಿರು ಬಿಡುವಂತಾಗಿದೆ. ಬಾಣಸವಾಡಿ ಕೆರೆ ಒತ್ತು ವರಿಯಾಗಿದ್ದು, ಕಟ್ಟಡಗಳನ್ನು ತೆರವುಗೊಳಿಸುವಂತೆ ಸ್ಥಳೀಯರಿಗೆ ಬೆಂಗಳೂರು ಪೂರ್ವ ತಹಸೀಲ್ದಾರ್ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸೆಕ್ಷನ್ 94ರ ಅನ್ವಯ ಏ.29ರಂದು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಎಂ.ಬಾಲಚಂದ್ರನ್ ಸೇರಿ 25 ಜನರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ. ಆನಂದ್ ಬೈರಾರೆಡ್ಡಿ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಅರ್ಜಿದಾರರ ಕಟ್ಟಡಗಳ ಸರ್ವೆ ಸಂಖ್ಯೆಯ ಗೊಂದಲಕ್ಕೆ ಸಂಬಂಧಿಸಿದಂತೆ ಸರ್ವೆ ದಾಖಲೆ ಮತ್ತು ಕಟ್ಟಡದ ನಕ್ಷೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ವಿಚಾರಣೆ ವೇಳೆ ಸರ್ಕಾರ ವಿರುದ್ಧ ಕಿಡಿಕಾರಿದ ಪೀಠ, `ಬಿಡಿಎ ಸಹ ಎಷ್ಟೋ ಎಕರೆ ಕೆರೆ ಜಾಗವನ್ನು ಒತ್ತುವರಿ ಮಾಡಿ ನಿವೇಶನ ನಿರ್ಮಿಸಿದೆ. ಇದಕ್ಕೂ ಮೊದಲು ಸರ್ಕಾರ ಸಹ ಸರಿಯಾದ ರೀತಿಯಲ್ಲಿ ಸರ್ವೇ ಕಾರ್ಯ ನಡೆಸಲು ಮುಂದಾಗಿಲ್ಲ. ಸರ್ಕಾರ ಹಾಗೂ ಬಿಡಿಎಯೇ ತಪ್ಪೆಸಗಿದ್ದು, ನಂತರ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗುತ್ತದೆ' ಎಂದು ಪೀಠ ಸರ್ಕಾರದ ಕಾರ್ಯವೈಖರಿಗೆ ಕಿಡಿಕಾರಿದೆ.