

ಮೈಸೂರು: ಕೆಲ ದಿನಗಳ ಹಿಂದೆ ಚಾಮರಾಜನಗರ ಡಿಸಿ ಎ.ಎಂ ಕುಂಜಪ್ಪ ಮೇಲೆ ಗ್ರಾನೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದ ಕೆಲವರು ನಡೆಸಿದ್ದಾರೆನ್ನಲಾದ ದಾಳಿ ಕಟು ಸತ್ಯವನ್ನು ಬಹಿರಂಗಗೊಳಿಸಿದೆ.
ಕಾಡುಗಳ್ಳ ವೀರಪ್ಪನ್ ಇದ್ದಾಗ ಕರ್ನಾಟಕ- ತಮಿಳುನಾಡು ಗಡಿಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಅಕ್ರಮ ಕಲ್ಲುಗಣಿಗಾರಿಕೆ ಚಟುವಟಿಕೆಗಳು, ಈಗ ಮತ್ತೆ ಪ್ರಾರಂಭವಾಗಿದ್ದು, ಕಾಡಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಶೇ.51 ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಮೀಸಲು, ಬಿಆರ್ ಹುಲಿಗಳ ಮೀಸಲು ಪ್ರದೇಶ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮ ಹೊಂದಿದ್ದು, ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಡಿಸಿ ಎ.ಎಂ ಕುಂಜಪ್ಪ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ವೀರಪ್ಪನ್ ಇದ್ದಾಗ ಗ್ರಾನೈಟ್ ಸಂಸ್ಥೆಯ ಮಾಲೀಕ ಸಂಪಂಗಿರಾಮಯ್ಯ ಅವರ ಪುತ್ರನನ್ನು ಅಪಹರಣ ಮಾಡಿದ್ದ. ಈ ಘಟನೆಯಾದ ಬಳಿಕ ವೀರಪ್ಪನ್ ಗ್ರಾನೈಟ್ ಘಟಕಗಳಿಂದ ಹಣ ಪಡೆಯುತ್ತಿದ್ದ ಎಂಬ ಮಾಹಿತಿ ಪಡೆದ ರಾಜ್ಯ ಸರ್ಕಾರ ಗಣಿಗಾರಿಕೆಯನ್ನು ನಿಷೇಧಿಸಿತ್ತು. ವೀರಪ್ಪನ್ ಹತ್ಯೆ ನಂತರ ಗಣಿಗಾರಿಕೆ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದ್ದು ಕಳೆದ ಮೂರು ತಿಂಗಳಿನಿಂದ ಪರವಾನಗಿ ಇಲ್ಲದ ಲಾರಿಗಳು ಅಕ್ರಮವಾಗಿ ಗ್ರಾನೈಟ್ ಸಾಗಣೆ ಮಾಡುತ್ತಿವೆ. ಅಕ್ರಮ ಸಾಗಣೆಯನ್ನು ಪತ್ತೆ ಮಾಡಲು ಸಿಬ್ಬಂದಿ ಕೊರತೆಯೂ ಎದುರಾಗಿದ್ದು ಚಾಮರಾಜನಗರ ಜಿಲ್ಲೆ ಗಡಿ ಪ್ರದೇಶದಲ್ಲಿ ಗ್ರಾನೈಟ್ ಲಾಬಿಯದ್ದೇ ಕಾರುಬಾರು ನಡೆಯುತ್ತಿದೆ.
ಸ್ಥಳೀಯರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು, ದೇವಸ್ಥಾನ ನಿರ್ಮಾಣ, ಪಂಚಾಯತ್ ಚುನಾವಣೆಗೆ ಹಣದ ನೆರವು ನೀಡುವ ಮೂಲಕ ಯಾರೂ ತಮ್ಮ ಅಕ್ರಮ ದಾರಿಗೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಗ್ರಾನೈಟ್ ಘಟಕಗಳಿಂದ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿದ್ದು, ಅಕ್ರಮ ಕಲ್ಲು ಗಣಿಗಾರಿಕೆ ಮತ್ತಷ್ಟು ಹೆಚ್ಚಲು ಇದೂ ಒಂದು ಕಾರಣವಾಗಿದೆ.