ಹಿಂಗಾರು ಆರ್ಭಟ; ಸಂಚಾರಕ್ಕೆ ಸಂಕಟ

ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ 15ಕ್ಕೂ ಹೆಚ್ಚು ಮರಗಳು, 40ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ. ಅಲ್ಲದೆ, ರಸ್ತೆಯಲ್ಲಿ ಮಳೆ ನೀರು ನಿಲ್ಲುವುದರಿಂದ ಸವಾರರು ಪರದಾಡಬೇಕಿದೆ
ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತ
ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತ
Updated on: 

ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಹಿಂಗಾರು ಮಳೆ ಬುಧವಾರವೂ ಮುಂದುವರಿದಿದ್ದು, ಜನಜೀವನ ಭಾರಿ ಅಸ್ತವ್ಯಸ್ತವಾಗಿದೆ. ಕೆಲಸ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದ, ಪರ ಊರಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಮಳೆಯಿಂದ ಉಂಟಾದ ಜಾಮ್ ತಲೆಬಿಸಿ ತಂದಿತ್ತು.

ಮೂರು ದಿನ ಸುರಿದ ಮಳೆಯಿಂದಾಗಿ ನಗರದ 15 ಮರಗಳಿಗೆ ಉರುಳಿದ್ದು, 40ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬಿಬಿಎಂಪಿಯ ನಿಯಂತ್ರಣ ಕೊಠಡಿಗೆ ಬಂದ ದೂರುಗಳ ಪ್ರಕಾರ 40ಕ್ಕೂ ಅಧಿಕ ಮನೆಗಳು, ರಸ್ತೆಗಳಿಗೆ ಹಾನಿಯಾಗಿದೆ. ಕೆಲವು ಕಡೆ ಇಡೀ ಮರಗಳು ಉರುಳಿದ್ದರೆ, ಮತ್ತೆ ಕೆಲವೆಡೆ ಕೊಂಬೆಗಳು ನೆಲಕ್ಕುರುಳಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟುಮಾಡಿದೆ. ಕೋರಮಂಗಲ 6ನೇ
ಬ್ಲಾಕ್‍ನ 7ನೇ ಅಡ್ಡರಸ್ತೆಯಲ್ಲಿ ಮರಕ್ಕೆ ಹಾನಿಯಾದರೆ, ಜಕ್ಕೂರು ವಾರ್ಡ್‍ನ ಜಿಕೆವಿಕೆ ಲೇಔಟ್‍ನಲ್ಲಿ ರಸ್ತೆಬದಿಯಲ್ಲಿ ನೀರಿನಲ್ಲೇ ಸಿಕ್ಕಿಹಾಕಿಕೊಂಡ ಶಾಲಾ ವಾಹನ, ಕೊಡಿಗೇಹಳ್ಳಿಯ ಸೊನ್ನೇಗೌಡ ಕಾಂಪ್ಲೆಕ್ಸ್ ನ ಚಿಕನ್ ಸೆಂಟರ್ ಬಳಿ ನೀರು ನುಗ್ಗಿದೆ. ಸಿ.ವಿ.ರಾಮನ್ ನಗರದ ಕೃಷ್ಣಪ್ಪ ಗಾರ್ಡನ್ ಬಳಿ ಮಳೆನೀರು ಕಾಲುವೆ ಒಡೆದು ಮನೆಗಳಿಗೆ ನೀರು ನುಗ್ಗಿ ಹಾನಿಯಾದ ದೂರು ಬಂದಿದೆ. ಬುಧವಾರವೂ ಭಾರೀ ಮಳೆ ಸುರಿದಿದ್ದು, ಹಲವು ಕಡೆಗಳಲ್ಲಿ ಹಾನಿಯಾಗಿದೆ.ಬಿನ್ನಿಮಿಲ್‍ನ ಎಂಎಂ ಲೈನ್, ಕ್ರೆಸೆಂಟ್ ರಸ್ತೆ, ಬನ್ನೇರುಘಟ್ಟ ರಸ್ತೆಯ ಮೈಕೋ ಲೇಔಟ್‍ನಲ್ಲಿ ಮರದ ಕೊಂಬೆಗಳು ಧರೆಗುರುಳಿ ಹಾನಿಯಾಗಿದೆ.

ಕಾಮಗಾರಿಗೂ ಅಡ್ಡಿ: ನಿತ್ಯ ಸಂಜೆ ಮಳೆ ಸುರಿಯುತ್ತಿರುವುದರಿಂದ ಹಿಂದಿನ ದಿನಗಳ ಮಳೆಹಾನಿ ಸರಿಪಡಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆಯ ನಡುವೆಯೂ ಮಳೆ ಸುರಿಯುತ್ತಿರುವುದರಿಂದ ಸಿಬ್ಬಂದಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯೂ ಮಳೆಯಿಂದಾಗಿ ಬಾಕಿ ಇದೆ.

ದೇವಸ್ಥಾನಕ್ಕೆ ನೀರು
ಗಾಳಿ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿ ತೊಂದರೆಯಾಗಿದೆ. ಹಲವು ವರ್ಷಗಳಿಂದ ಇಲ್ಲಿನ ರಾಜಕಾಲುವೆ ನೀರು ರಸ್ತೆಮಟ್ಟಕ್ಕೆ ಹರಿದು ದೇವಸ್ಥಾನದ ಒಳಗೆ ನೀರು ಬರುತ್ತಿತ್ತು. ಇದಕ್ಕಾಗಿ ಯೋಜನೆ ಕೈಗೊಂಡಿದ್ದರೂ ಅದು ಪ್ರಯೋಜನಕ್ಕೆ ಬಾರದಾಗಿತ್ತು

ಎಲ್ಲೆಲ್ಲೂ ಟ್ರಾಫಿಕ್ ಜಾಮ್

ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಗಳು ನೀರಿನಿಂದ ತುಂಬಿ ಹರಿದ ಪರಿಣಾಮ ನಗರದೆಲ್ಲೆಡೆ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಇನ್ನೇನು ಕಚೇರಿ ಕೆಲಸಗಳನ್ನು ಮುಗಿಸಿ ಮನೆ ಸೇರಬೇಕೆಂದು ಬಯಸಿದ್ದ ನಗರದ ನಿವಾಸಿಗಳಿಗೆ ಮಳೆರಾಯ ಅಡ್ಡಬಂದ. ಸಾವಿರಾರು ಮಂದಿ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೊಯ್ದುಕೊಂಡೇ ಮನೆ ಸೇರಬೇಕಾಯಿತು. ರಸ್ತೆಯಲ್ಲಿ ಮಂಡಿಉದ್ದ ನೀರು ನಿಂತ ಪರಿಣಾಮ ಆಟೋಗಳು, ದ್ವಿಚಕ್ರ ವಾಹನಗಳು ನೀರಿನಲ್ಲೇ ನಿಂತ ಪರಿಣಾಮ ವಾಹನಗಳನ್ನು ನೂಕಿಕೊಂಡು ಹೊರಬರಬೇಕಾಯಿತು. ಕೆ.ಆರ್.ವೃತ್ತ, ಮೇಖ್ರಿ ವೃತ್ತ, ಕೆ.ಆರ್. ಮಾರುಕಟ್ಟೆ, ಡಾ.ರಾಜಕುಮಾರ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕಾರ್ಪೋರೇಷನ್ ವೃತ್ತ, ವಿಮಾನ ನಿಲ್ದಾಣ ರಸ್ತೆ, ಬನ್ನೇರುಘಟ್ಟ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಯಿತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com