

ಹುನಗುಂದ: ಯುವಕನೋರ್ವ 14 ವರ್ಷದ ಮೂಗಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ಗ್ರಾಮದ ಬಸಪ್ಪ ಹನುಮಂತ ಬಜಂತ್ರಿ (30) ಅತ್ಯಾಚಾರ ಆರೋಪಿ. ಮೂಗಿ ಬಾಲಕಿ ಗ್ರಾಮದಲ್ಲಿಯೇ ಇರುವ ದೊಡ್ಡಪ್ಪನ ಮನೆಗೆ ನಿತ್ಯ ಟಿವಿ ನೋಡಲು ಹೋಗುತ್ತಿದ್ದಳು. ಭಾನುವಾರ ಸಂಜೆ ಎಂದಿನಂತೆ ಟಿವಿ ನೋಡಲು ತೆರಳುತ್ತಿದ್ದಾಗ ಮಾರ್ಗದ ಮಧ್ಯೆ ಮನೆ ಇರುವ ಬಸಪ್ಪ ಬಜಂತ್ರಿ ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.
ಬಾಲಕಿ ಮೂಗಿಯಾಗಿದ್ದರಿಂದ ಮರಳಿ ಮನೆಗೆ ಬಂದ ನಂತರ ಮನೆಯಲ್ಲಿದ್ದ ತನ್ನ ಅಜ್ಜಿಗೆ ಕೈ ಸೊನ್ನೆ ಮಾಡಿ ಏನೋ ಹೇಳಿದ್ದಾಳೆ. ಅಜ್ಜಿಗೆ ಇದು ತಿಳಿಯದ ಕಾರಣ ಅವಳನ್ನೇ ಯುವಕ ಅತ್ಯಾಚಾರ ಮಾಡಿದ ಮನೆಗೆ ಕರೆದುಕೊಂಡು ಹೋಗಿ ಸೊನ್ನೆಯ ಮೂಲಕ ಅಜ್ಜಿಗೆ ವಿವರಿಸಿದ್ದಾಳೆ. ಈ ವಿಷಯವನ್ನು ಬಾಲಕಿಯ ಅಜ್ಜಿ ಮನೆಯವರಿಗೆ ತಿಳಿಸಿದ ನಂತರ ಅತ್ಯಾಚಾರ ಮಾಡಿದ ಬಸಪ್ಪನನ್ನು ವಿಚಾರಿಸಲು ಹೋದಾಗ ಆತ ಪರಾರಿಯಾಗಿದ್ದ.