

ಬೆಂಗಳೂರು: ರಾಷ್ಟ್ರಾದ್ಯಂತ `ಸದ್ದು' ಮಾಡಿ ಒನ್ ಮಾ್ಯನ್ ಶೋನಂತೆ ರಾರಾಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಜಪ ಈಗ ನಡೆಯುವುದಿಲ್ಲವೇ? ದಕ್ಷಿಣದಲ್ಲಿ ಬಿಜೆಪಿಗೆ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯಲಿದೆಯೇ? ಇಲ್ಲವೇ ಸ್ಥಳೀಯ ನಾಯಕತ್ವಕ್ಕೆ ಮರಳಬೇಕೆ? ಜೆಡಿಯು- ಆರ್‍ಜೆಡಿ ಒಂದಾದ ಹಿನ್ನೆಲೆಯ ರಾಜ್ಯದಲ್ಲಿರುವ ಜನತಾ ಪರಿವಾರದ ನಾಯಕರು ಒಗ್ಗೂಡುವರೆ? ಈ ಪ್ರಶ್ನೆಗಳು ಇದೀಗ ಮೇಲೆದ್ದಿವೆ.
ಬಿಹಾರದಲ್ಲಿ ಮಹಾಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಸಿಕ್ಕಿರುವುದರಿಂದ ದೇಶದ ರಾಜಕಾರಣದಲ್ಲಿ ತಳಮಳ ಆರಂಭವಾಗಿದೆ. ಏಕ ವ್ಯಕ್ತಿ- ಏಕ ಪಕ್ಷ ಎಂಬ ಉಕ್ತಿಗೆ ಅಂಟಿಕೊಂಡು ಆಯಾ ಪ್ರಾದೇಶಿಕ ಪಕ್ಷಗಳನ್ನು ಮರೆತಿದ್ದರೆ ಎಂಬ ಅನುಮಾನವನ್ನು ಬಿಹಾರದ ಜನತೆ ಸುಳ್ಳು ಮಾಡಿದ್ದಾರೆ. ಇತರೆ ರಾಜ್ಯಗಳ ಮೇಲೂ ಇದರ ಛಾಯೆ ಬೀರಿರುವುದು ಅಕ್ಷರಶಃ ಸತ್ಯ.ಕರ್ನಾಟಕದಲ್ಲಿ ಇಷ್ಟು ದಿನ ಮೋದಿ ಜಪ ಮಾಡುತ್ತಿದ್ದ ಬಿಜೆಪಿ ನಾಯಕರು ಇನ್ನು ಮೇಲೆ ಮತ ಸೆಳೆಯುವ ಸ್ಥಳೀಯ ನಾಯಕನಿಗೆ ಮನ್ನಣೆ ನೀಡಲು ಸಕಾಲವಾಗಬಹುದು.
ಬಿಹಾರದಲ್ಲಿ ಮತ ಸೆಳೆಯುವ ನಾಯಕರಿದ್ದರೂ ಸಹ ಅಲ್ಲಿ ಜಾತಿ ಪ್ರಮುಖ ಟ್ರಂಪ್ ಕಾರ್ಡ್ ಆಗಿತ್ತು. ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸಿದಲ್ಲಿ 2018ರ
ಚುನಾವಣೆಯಲ್ಲಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರನ್ನು ನಿಯೋಜಿಸಿ ಮುಂದಿನ
ಚುನಾವಣೆ ಎದುರಿಸಿದರೆ ಜಯ ಸಿಗಬಹುದೇ?ಎನ್ನುವ ಜತೆಗೆ ಈಗ ಸ್ಥಳೀಯ ನಾಯಕತ್ವದ ವಿಚಾರದ ಪ್ರಸ್ತಾಪವಿಡುವ ಸುದ್ದಿಗಳು ಹರಿದಾಡುತ್ತಿವೆ.