ಜಿಲ್ಲಾ ಸುದ್ದಿ

ಕಬ್ಬನ್ ಪಾರ್ಕ್ ಅತ್ಯಾಚಾರ ಪ್ರಕರಣ: ಭದ್ರತಾ ಏಜೆನ್ಸಿಯದ್ದೂ ಇದೆ ಲೋಪ

ಕಬ್ಬನ್ ಪಾರ್ಕ್ ಅತ್ಯಾಚಾರ ಪ್ರಕರಣ: ಭದ್ರತಾ ಏಜೆನ್ಸಿಯದ್ದೂ ಇದೆ ಲೋಪ
ಬಂಧಿತ ಆರೋಪಿಗಳು
Published On :

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಭದ್ರತಾ ಸಿಬ್ಬಂದಿಯನ್ನು ಪೂರೈಸಿರುವ ಸೆಕ್ಯುರಿಟಿ ಏಜೆನ್ಸಿಯದ್ದು ದೊಡ್ಡ ತಪ್ಪಿದೆ. ಆದ್ದರಿಂದ ಆ ಸಂಸ್ಥೆ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇನ್ನು ಮುಂದೆ ಯಾವುದೇ ಖಾಸಗಿ ಭದ್ರತಾ ಸಂಸ್ಥೆಗಳು ಸಿಬ್ಬಂದಿ ಪೂರೈಸುವಾಗ ಪೊಲೀಸರಿಂದ ಎನ್‍ಒಸಿ ಪಡೆಯುವುದನ್ನು ಕಡ್ಡಾಯ ಮಾಡಬೇಕಿದೆ ಎಂದು ರಾಜ್ಯ ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ವಿ. ಎಸ್. ಉಗ್ರಪ್ಪ ಹೇಳಿದ್ದಾರೆ. ಕಬ್ಬನ್ ಪಾರ್ಕ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯನ್ನು ಗಮನಿಸಿದರೆ ಅತ್ಯಾಚಾರ ಆರೋಪಿಗಳಾಗಿರುವ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಕಬ್ಬನ್‍ಪಾರ್ಕ್‍ಗೆ ಪೂರೈಸಿದ್ದ ರಾಜಾಜಿನಗರದ ಪವನ್ ಸೆಕ್ಯುರಿಟಿ ಆ್ಯಂಡ್ ಡಿಟೆಕ್ಟಿವ್ ಸಂಸ್ಥೆ ಜಾಗೃತಿ ವಹಿಸಬೇಕಿತ್ತು.

ಅವರ ಚರಿತ್ರೆ ಮತ್ತು ಕುಟುಂಬದ ಹಿನ್ನೆಲೆ ಮೊದಲಾದ ವಿಚಾರಗಳನ್ನು ಪರಿಶೀಲಿಸಬೇಕಿತ್ತು. ಆ ವಿಚಾರದಲ್ಲಿ ಈ ಸಂಸ್ಥೆ ವಿಫಲವಾಗಿದೆ. ಆದ್ದರಿಂದ ಪವನ್ ಸೆಕ್ಯುರಿಟಿ ಆ್ಯಂಡ್ ಡಿಟೆಕ್ಟಿವ್ ಸಂಸ್ಥೆ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದರು.

ಕಾನೂನಿಗೆ ಶಿಫಾರಸು: ಇನ್ನು ಮುಂದೆ ಯಾವುದೇ ಖಾಸಗಿ ಸಂಸ್ಥೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ಸೆಕ್ಯುರಿಟಿ ಗಾರ್ಡ್, ಟ್ಯಾಕ್ಸಿ ಚಾಲಕರಾಗಿ ಕೆಲಸಕ್ಕೆ ಸೇರುವವರು ಪೆÇಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(ಎನ್‍ಒಸಿ) ಕಡ್ಡಾಯವಾಗಿ ಪಡೆಯುವ ಸಂಬಂಧ ನೂತನ ಕಾನೂನು ರೂಪಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಸಮಿತಿ ವತಿಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದೆಂದು ತಿಳಿಸಿದರು.

ಖಾಸಗಿ ಸಂಘ, ಸಂಸ್ಥೆಗಳ, ಶಾಲಾ-ಕಾಲೇಜುಗಳಲ್ಲಿ ಸೆಕ್ಯುರಿಟಿ ಗಾರ್ಡ್‍ಗಳು ಹಾಗೂ ಟೆಂಪೋ, ಕ್ಯಾಬ್ ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಅವರ ಪೂರ್ವಪರ ವಿಚಾರಿಸಬೇಕು.ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಂಘ, ಸಂಸ್ಥೆಗಳು, ಮಠಮಾನ್ಯಗಳು ಹೆಣ್ಣುಮಕ್ಕಳ ರಕ್ಷಣೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಹೊರ ರಾಜ್ಯದವರ ಕೃತ್ಯ: ಹೊರ ರಾಜ್ಯದವರ ಅಕ್ರಮ ಮತ್ತು ಅಪರಾಧ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕ ವಿಧೇಯಕ ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಅತ್ಯಾಚಾರ ತಡೆ ಸಮಿತಿ ನಿರ್ಧರಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಇತರೆ ಅಪರಾಧಗಳಲ್ಲಿ ನೆರೆ ರಾಜ್ಯದವರೇ ಹೆಚ್ಚು ಪ್ರಮಾಣದಲ್ಲಿ ಆರೋಪಿಯಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕಬ್ಬನ್ ಪಾರ್ಕ್‍ನಲ್ಲಿ ನಡೆದಿರುವ ಅತ್ಯಾಚಾರದ ಆರೋಪಿಗಳಿಬ್ಬರೂ ಹೊರ ರಾಜ್ಯದವರು. ಇತ್ತೀಚಿಗೆ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಕೂಡ ನೆರೆ ರಾಜ್ಯದವರೇ ಆರೋಪಿಯಾಗಿದ್ದರು.

ಹಾಗೆಂದು ರಾಜ್ಯಕ್ಕೆ ಬರುವ ನೆರೆ ರಾಜ್ಯದ ವಿರುದ್ಧ ಏಕಾಏಕಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಕಾನೂನಿನಲ್ಲಿ ಅವಕಾಶವೂ ಇಲ್ಲ. ಆದ್ದರಿಂದ ಇನ್ನುಮುಂದೆ ನೆರೆ ರಾಜ್ಯದವರು ರಾಜ್ಯಕ್ಕೆ ಬರುವುದು, ಉದ್ಯೋಗ ಮತ್ತು ಇತರೆ ವ್ಯವಹಾರ ನಡೆಸುವ ಬಗ್ಗೆ ನಿಗಾ ವಹಿಸಲು ಮತ್ತು ಅವರ ಬಗ್ಗೆ ಹಿನ್ನೆಲೆ ಸಂಗ್ರಹಿಸಿ ಅಪರಾಧ ತಡೆಯುವಂತಾಗಲು
ಸೂಕ್ತ ಕಾಯ್ದೆ ರಚಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಅತ್ಯಾಚಾರ ತಡೆ ಸಮಿತಿ ಭೇಟಿ, ಪರಿಶೀಲನೆ: ಕಬ್ಬನ್‍ಪಾರ್ಕ್‍ನಲ್ಲಿ ನ.11ರ ರಾತ್ರಿ ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳಿಂದ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಶುಕ್ರವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹಾಗೂ ಸದಸ್ಯರೊಂದಿಗೆ ಶುಕ್ರವಾರ ಕಬ್ಬನ್‍ಪಾಕ್ರ್ ಗೆ ಭೇಟಿ ನೀಡಿ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರಿಂದ ಮಾಹಿತಿ ಕಲೆ ಹಾಕಿದ ಸದಸ್ಯರು, ಘಟನೆ ನಡೆದ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯೇಶನ್, ಕಬ್ಬನ್‍ಪಾರ್ಕ್ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಇದು ಮೇಲ್ನೋಟಕ್ಕೆ ಅತ್ಯಾಚಾರ ಎಂದು ಸ್ಪಷ್ಟವಾಗಿದೆ ಎಂದರು.

ಅತ್ಯಾಚಾರಕ್ಕೆ ಬಿಜೆಪಿ ಖಂಡನೆ
ರಾಜ್ಯದಲ್ಲಿ ಗೃಹ ಸಚಿವರು ಬದಲಾದರೂ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಬೆಂಗಳೂರು ಅತ್ಯಾಚಾರದ ರಾಜಧಾನಿ ಎಂದು ಅಪಕೀರ್ತಿ ತಂದಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡದೇ ಸರ್ಕಾರಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿರುವುದಕ್ಕೆ ಅತ್ಯಾಚಾರ ಪ್ರಕರಣಗಳೇ ಉದಾಹರಣೆ ಎಂದು ಪಕ್ಷದ ರಾಜ್ಯ ಸಹ ವಕ್ತಾರರಾದ ಸಿ.ಮಂಜುಳಾ, ತೇಜಸ್ವಿನಿ ಗೌಡ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ನ್ಯಾಯಾಂಗ ವಶಕ್ಕೆ

ಆರೋಪಿಗಳಾದ ರಾಜು ಮೇಟಿ , ಬೋಲಿನ್ ದಾಸ್‍ನನ್ನು ನ್ಯಾಯಾಲಯವು ನ.27ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಆರೋಪಿಗಳಿಬ್ಬರ ವಿಚಾರಣೆ ವೇಳೆ ಅವರು ಈ ಹಿಂದೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿಲ್ಲ ಎಂದು ಕಬ್ಬನ್ ಪಾರ್ಕ್ ಪೊಲೀಸರು ಹೇಳಿದ್ದಾರೆ. ಮಹಿಳೆ ಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ನಂತರ ಮನೋತಜ್ಞರ ಬಳಿಯೂ ಕೌನ್ಸೆಲಿಂಗ್ ನಡೆಸಲಾಗಿದೆ. ಯಾವುದೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿಲ್ಲ. ಆದರೆ, ಕೌಟುಂಬಿಕ ಸಮಸ್ಯೆ ಹಾಗೂ ಅತ್ಯಾಚಾರ ಘಟನೆಯಿಂದ ಮಾನಸಿಕವಾಗಿ ಖಿನ್ನರಾಗಿದ್ದಾರೆಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.