ಜಾರ್ಜ್-ರಮೇಶ್ ಜಟಾಪಟಿ

ಹೈಕಮಾಂಡ್ ಹಾಗೂ ಸಿಎಂಗೆ ವಿನಂತಿಸಿ ನಿಮ್ಮನ್ನೇ ಗೃಹ ಸಚಿವರನ್ನಾಗಿ ಮಾಡಿ ಎನ್ನುತ್ತೇವೆ. ಆಗ ಮಾಡಿ ತೋರಿಸಿ...
ಕೆ.ಜೆ.ಜಾರ್ಜ್ ಮತ್ತು ರಮೇಶ್ ಕುಮಾರ್
ಕೆ.ಜೆ.ಜಾರ್ಜ್ ಮತ್ತು ರಮೇಶ್ ಕುಮಾರ್
Updated on: 

ವಿಧಾನಸಭೆ: `ಹೈಕಮಾಂಡ್ ಹಾಗೂ ಸಿಎಂಗೆ ವಿನಂತಿಸಿ ನಿಮ್ಮನ್ನೇ ಗೃಹ ಸಚಿವರನ್ನಾಗಿ  ಮಾಡಿ ಎನ್ನುತ್ತೇವೆ. ಆಗ ಮಾಡಿ ತೋರಿಸಿ...!'

`ನಾನು ಈ ಸದನದಲ್ಲಿ ಚಾಲೆಂಜ್ ಮಾಡುತ್ತೇನೆ. ನನಗೆ ಜವಾಬ್ದಾರಿ ಕೊಟ್ಟು ನೋಡಿ. ಒಂದು  ತಿಂಗಳಲ್ಲಿ ಪರಿಸ್ಥಿತಿ ಬದಲಾಯಿಸದೇ ಇದ್ದರೆ ಈ ಸದನಕ್ಕೆ ಮುಖ ತೋರಿಸುವುದಿಲ್ಲ ..!!'

ಇದು ಆಡಳಿತ - ಪ್ರತಿಪಕ್ಷದ ಸದಸ್ಯರ ಮಧ್ಯೆ ನಡೆದ ಸವಾಲು-ಜವಾಬು ಅಲ್ಲ. ರಾಜ್ಯದ ಕಾನೂನು-ಸುವ್ಯವಸ್ಥೆ ಕುರಿತು ಸರ್ಕಾರದ ಪ್ರಭಾವಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕಾಂಗ್ರೆಸ್‍ನ  ಹಿರಿಯ ಸದಸ್ಯ ರಮೇಶ್‍ಕುಮಾರ್ ಮಧ್ಯೆ ನಡೆದ ಮಾತಿನ ಚಕಮಕಿ. ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೊಬ್ಬರ ಮಧ್ಯೆ ಈ ಪರಿಯ ವಾಗ್ವಾದ ನಡೆದಿದ್ದು ವಿರಳ.

ಕಾರಣವೇನು?: ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಸನದಲ್ಲಿ ನಡೆದ ಅತ್ಯಾಚಾರ  ಪ್ರಕರಣವೊಂದರ ಬಗ್ಗೆ ಪ್ರಸ್ತಾಪಿಸಿದರು. ಆರೋಪಿಗಳ ಬಟ್ಟೆಯನ್ನು ಸಂಗ್ರಹಿಸದೇ  ತನಿಖಾಧಿಕಾರಿ ಕರ್ತವ್ಯಲೋಪ ಎಸಗಿದ್ದಾರೆ.ಕ್ರಮ ತೆಗೆದುಕೊಳ್ಳುವಂತೆ ಡಿಜಿಪಿ ಪತ್ರ  ಬರೆದಿದ್ದರೂ  ದಕ್ಷಿಣ ವಲಯ ಐಜಿಪಿ ಕ್ರಮ ತೆಗೆದುಕೊಂಡಿಲ್ಲ ಎಂದು  ಪತ್ರವನ್ನು ಪ್ರದರ್ಶಿಸಿದರು. ಇದಕ್ಕೆ ಆಡಳಿತ ಹಾಗೂ ಪ್ರತಿಪಕ್ಷದ ಮಹಿಳಾ ಸದಸ್ಯರು ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಆಗ ಮಾತನಾಡಿದ ರಮೇಶ್ ಕುಮಾರ್, ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳದೇ ಇದ್ದರೆ ಆತ ಅಷ್ಟೊಂದು ಪ್ರಭಾವಶಾಲಿಯಾಗಿರಬೇಕು. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳ ತಂದೆಯ ಸ್ಥಾನದಲ್ಲಿ ನಿಂತು ನಾನು ಕೇಳುತ್ತೇನೆ. ಸರ್ಕಾರಕ್ಕೆ ಮನುಷ್ಯತ್ವ ಇದೆಯೆ? ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಹಿರಿಯರ ಜಗಳ್‍ಬಂದಿ:
ನಾವು ಬಂಧಿಸಿದ್ದೇವೆ. ಆದರೆ, ಕೋರ್ಟ್ ಜಾಮೀನು ನೀಡಿದೆ. ಏನು ಮಾಡುವುದು?' ಎಂದು ನೀವು ಹೇಳಬಹುದು. ಜಾಮೀನು ಸಿಕ್ಕುತ್ತಿದ್ದಂತೆ ಆತನಿಗೆ ಚೆನ್ನಾಗಿ ಏಟು ಕೊಡಿ. ಓಡಾಡಲು ಆಗದೇ ಇರುವಂತೆ ಮಾಡಿ ಎಂದು ರಮೇಶ್‍ಕುಮಾರ್ ಸಲಹೆ ನೀಡಿದರು. ಹಾಗೆ ಮಾಡುವುದಕ್ಕೆ ಇದು ಮಧ್ಯಪ್ರಾಚ್ಯ ರಾಷ್ಟ್ರವಲ್ಲ. ಕಾನೂನು ಪ್ರಕಾರ ಏನು ಮಾಡಬೇಕೋ  ಅದನ್ನೇ ಮಾಡುತ್ತೇವೆ ಎಂದರು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್.

ಇದಕ್ಕೆ ಕೆರಳಿದ ರಮೇಶ್ ಕುಮಾರ್, ಸಿದ್ದಲಿಂಗಪ್ಪ, ರಾಚಯ್ಯ ಗೃಹ ಸಚಿವರಾಗಿ ಕೆಲಸ ಮಾಡಿಲ್ಲವೇ? ರಾಚಯ್ಯನವರು ಬೆಂಗಳೂರಿನ ಪಾತಕಿಗಳ ಹುಟ್ಟಡಗಿಸಿದರು ಕುಟುಕಿದರು. ಕೆರಳಿದ ಜಾರ್ಜ್, ಹಾಗಾದರೆ ಹೈಕಮಾಂಡ್ ಹಾಗೂ ಸಿಎಂಗೆ ವಿನಂತಿ ಮಾಡುತ್ತೇನೆ. ರಮೇಶ್  ಕುಮಾರ್‍ರನ್ನೇ ಗೃಹಸಚಿವರನ್ನಾಗಿ ಮಾಡಿ ಎನ್ನುತ್ತೇನೆ ಎಂದು ವ್ಯಂಗ್ಯವಾಡಿದಾಗ  ಕೋಪಾವಿಷ್ಠರಾದ ರಮೇಶ್ ಕುಮಾರ್, ನಾನೂ ಚಾಲೆಂಜ್ ಮಾಡ್ತೇನ್ರಿ. ನನಗೆ ಜವಾಬ್ದಾರಿ ಕೊಟ್ಟು ನೋಡಿ. ಒಂದು ತಿಂಗಳಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ವಾತಾವರಣ ಬದಲಿಸದೇ ಇದ್ದರೆ ಈ ಸದನಕ್ಕೆ ಮುಖ ತೋರುವುದಿಲ್ಲ ಎಂದರು.  ರಮೇಶ್ ಕುಮಾರ್‍ಗೆ ಬೆಂಬಲ ದೊರೆತರೆ ಜಾರ್ಜ್ ಪೆಚ್ಚಾಗಿ ಕುಳಿತರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com