

ವಿಧಾನ ಪರಿಷತ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಕೆರೆ ಅಂಗಳವನ್ನು ಒತ್ತುವರಿ ಮಾಡಿತೇ? ಹೀಗೊಂದು ಅಚ್ಚರಿ ಪ್ರಶ್ನೆ ಆಡಳಿತ ಪಕ್ಷದ ಸದಸ್ಯರಿಂದಲೇ ಸರ್ಕಾರಕ್ಕೆ ಬಂತು.
ಪ್ರಶ್ನೋತ್ತರ ವೇಳೆಯಲ್ಲಿ ವಿ. ಎಸ್.ಉಗ್ರಪ್ಪನವರು ಮಾತನಾಡಿ, ಬಿಡಿಎಯು ಬೆಂಗಳೂರು ನಗರದ ಕೆರೆ ಅಂಗಳಗಳಲ್ಲಿ 23 ಬಡಾವಣೆಗಳನ್ನು ನಿರ್ಮಿಸಿದೆ ಎಂದರೆ, ಆ ಕೆರೆಯಿದ್ದ ಜಾಗ ಕೆರೆಯ ಸ್ವರೂಪದಲ್ಲಿ ಇರಲಿಲ್ಲವಾ? ಅಥವಾ ನೀವೇ ಬಡಾವಣೆ ನಿರ್ಮಿಸಲು ಒತ್ತುವರಿ ಮಾಡಿದಿರಾ ಎಂದು ಪ್ರಶ್ನಿಸಿದರು. ನಗರದ ಕೆರೆ ಅಂಗಳಗಳಲ್ಲಿ ಒಟ್ಟು 23 ಬಡಾವಣೆಗಳಲ್ಲಿ ವಿವಿಧ ಅಳತೆಯ 3230 ನಿವೇಶನಗಳನ್ನು ರಚಿಸಲಾಗಿದೆ.
ಈ ಪೈಕಿ 2926 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 304 ನಿವೇಶನಗಳನ್ನು ಹಾಗೆ ಉಳಿಸಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿರುವ ಇತರೆ ಕೆರೆಗಳ ಸಂರಕ್ಷಣೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಜಾರ್ಜ್, ಬಿಡಿಎ ನೋಟಿಪಿsಕೇಷನ್ ಮಾಡಿದ ಮೇಲೂ ಆ ಜಾಗವನ್ನು ಕೆರೆ ಎಂದೇ ನಮೂದಿಸಿರುವುದರಿಂದ ಕೆರೆ ಎಂಬುದಾಗಿ ತಪ್ಪು ಮುದ್ರಣವಾಗಿದೆ. ಸದ್ಯದಲ್ಲಿಯೇ ಪಟ್ಟಿಯನ್ನು ಪರಿಷ್ಕರಿಸಲಾಗುವುದು. ಸುಪ್ರೀಂ ಕೋರ್ಟ್ ಕೆರೆಗಳ ಸಂರಕ್ಷಣೆಗೆ ತೀರ್ಪು ನೀಡಿರುವುದರಿಂದ ಕೆರೆಗಳ ಸಂರಕ್ಷಣೆಗೆ ಕ್ರಮ ವಹಿಸಲಾಗುತ್ತಿದೆ.
ರಾಜ್ಯಾದ್ಯಂತ ಆಯಾ ಜಿಲ್ಲಾಧಿಕಾರಿಗಳಿಗೆ ಕೆರೆಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕೆರೆ ಸಂರಕ್ಷಣಾ ಕಾಯಿದೆ 69ರ ಪ್ರಕಾರ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದರು.
ಧರಣಿ: ತಾವು ಕೇಳಿದ ಪ್ರಶ್ನೆಗೆ ಬೆಂಗಳೂರು ಅಭಿವೃದ್ಧಿ ಸಚಿವರು ಅಸಮಂಜಸ ಉತ್ತರ ನೀಡಿ ಸದನದಿಂದ ಹೊರಗೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ
ಬಿ.ಜೆ.ಪುಟ್ಟಸ್ವಾಮಿ, ಸದನದ ಬಾವಿಗೆ ತೆರಳಿ ಧರಣಿಗೆ ಮುಂದಾದ ಪ್ರಸಂಗ ನಡೆಯಿತು.
ಬಿಬಿಎಂಪಿ ವಾರ್ಡ್ 18ರ ಡಾಲರ್ಸ್ ಕಾಲೋನಿಯಲ್ಲಿರುವ ಬುಲ್ಲೆ ಪಾರ್ಕ್ ಬಳಿ ಇರುವ ದೊಡ್ಡ ಮೋರಿಯಲ್ಲಿ ಘನತ್ಯಾಜ್ಯ ಸಂಗ್ರಹ ಮತ್ತು ನಾಯಿಗಳ ಕಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದನಿ ಎತ್ತಿದ್ದರು. ಇದಕ್ಕೆ ಸಚಿವರು ಉತ್ತರ ನೀಡಿ ಸದನದಿಂದ ಹೊರಟರು. ಉತ್ತರದಿಂದ ತೃಪ್ತರಾಗದ ಸದಸ್ಯರು ಅಸಮಾಧಾನ ಹೊರಹಾಕಿದರು. ಕೂಡಲೇ ಸಚಿವರನ್ನು ವಾಪಸ್ ಕರೆಸಿ ಉತ್ತರ ಕೊಡಿಸಲಾಯಿತು. ಸಚಿವರು ಇನ್ನು ಎರಡು
ಮೂರು ದಿನದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.