ವಾರ್ಡ್ ಸಮಿತಿಗಳಲ್ಲಿ ಎನ್‍ಜಿಒ ಇರಲಿ: ದಿನೇಶ್

ಬಿಬಿಎಂಪಿ ವಾರ್ಡ್‍ವಾರು ಅಭಿವೃದ್ಧಿಗೆ ಪೂರಕವಾಗಿ ರಚಿಸುವ ವಾರ್ಡ್ ಸಮಿತಿಗಳಲ್ಲಿ ಸ್ಥಳೀಯ ಜನರು ಹಾಗೂ ಎನ್‍ಜಿಒ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಆಹಾರ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು...
ಆಹಾರ ಸಚಿವ ದಿನೇಶ್ ಗುಂಡೂರಾವ್ (ಸಂಗ್ರಹ ಚಿತ್ರ)
ಆಹಾರ ಸಚಿವ ದಿನೇಶ್ ಗುಂಡೂರಾವ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಬಿಬಿಎಂಪಿ ವಾರ್ಡ್‍ವಾರು ಅಭಿವೃದ್ಧಿಗೆ ಪೂರಕವಾಗಿ ರಚಿಸುವ ವಾರ್ಡ್ ಸಮಿತಿಗಳಲ್ಲಿ ಸ್ಥಳೀಯ ಜನರು ಹಾಗೂ ಎನ್‍ಜಿಒ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಆಹಾರ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

ಅಭಿವೃದ್ಧಿ ವೇದಿಕೆ ರಂಗೋತ್ರಿ ಸಂಸ್ಥೆಯು ರಾಜಾಜಿನಗರದ ಡಾ.ರಾಜ್‍ಕುಮಾರ್ ಕಲಾಕ್ಷೇತ್ರ ದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ಅಭಿವೃದ್ಧಿ ದಿಕ್ಸೂಚಿ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಮೂರು ನಾಲ್ಕು ಬಾರಿ ಗೆದ್ದಿರುವ ಪಾಲಿಕೆ ಸದಸ್ಯರು ಹೊಸಬರಿಗೆ ಒಳ್ಳೆಯ ಮಾರ್ಗಗಳನ್ನು ತೋರಿಸಬೇಕು. ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ಬಿಡುಗಡೆಯಾಗುವ ಅನುದಾನ ಮತ್ತು ಬಿಬಿಎಂಪಿ ಬಜೆಟ್‍ನಲ್ಲಿ ಘೋಷಣೆಯಾಗುವ ಅನುದಾನ ಬಳಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುತುವರ್ಜಿವಹಿಸಬೇಕು. ಮೂಲಭೂತ ಸೌಕರ್ಯಗಳಾದ ನೀರು, ಕಸ ನಿರ್ವಹಣೆ, ಬೀದಿ ದೀಪ ನಿರ್ವಹಣೆಯಲ್ಲಿ ಯಾವುದೇ ಲೋಪದೋಷ ಕಂಡು ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಅದೇ ನಿಮ್ಮ ಮತ ದಾರರಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದರು.

ಬೆಂಗಳೂರು ನಗರ ಎಲ್ಲರನ್ನೂ ಆಕರ್ಷಿಸುವ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಯಾರು ಎಲ್ಲಿ ಕೆಲಸ ಮಾಡಿದರೂ ಅಂತಿಮ ದಿನಗಳನ್ನು ಬೆಂಗಳೂರಿನಲ್ಲಿ ಕಳೆಯಲು ಇಚ್ಛಿಸುತ್ತಾರೆ. ಇಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸುವುದು ನಮಗೆ ಸವಾಲಿನ ಕೆಲಸವಾಗಿದೆ. ಮಾಹಿತಿ- ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಬೆಂಗಳೂರನ್ನು
ಈ ಮಾನದಂಡದ ಮೇಲೆ ಅಳೆಯಬೇಕು. ಪ್ರತಿಭಾವಂತ ಜನರ ಜ್ಞಾನವನ್ನು ಓರೆಗೆ ಹಚ್ಚುವ ಕೆಲಸ ನಮ್ಮಿಂದಾಗಬೇಕು. ಅವರಿಗೆ ಪೂರಕವಾದ ವಾತಾವರಣ ನಿರ್ಮಿಸಿಕೊಟ್ಟು ಸಂತೈಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಇದೇ ವೇಳೆ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ, ಉಪಮೇಯರ್ ಎಸ್.ಪಿ. ಹೇಮಲತಾ ಗೋಪಾಲಯ್ಯ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ವಿಚಾರವಾಗಿ ನಾಗರಿಕರು ಸಲಹೆ ಸೂಚನೆ ನೀಡಿದರು. ನೂತನ ಸದಸ್ಯರಾದ ಎಂ.ಶಿವರಾಜ್, ಎಸ್.ಕೇಶವಮೂರ್ತಿ, ದೀಪಾ ನಾಗೇಶ್, ಎಂ. ಮಹಾದೇವ್, ಜಿ. ಪದ್ಮಾವತಿ, ಕಮಾರಿ ಪಳನಿಕಾಂತ್, ಕೆ.ವಿ. ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಗೋಪಾಲಯ್ಯ, ಮಣಿಪಾಲ್ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ಎಸ್.ಸಿ.ನಾಗೇಂದ್ರಸ್ವಾಮಿ, ವಿಜ್ಞಾನಿ ಅಶ್ವಿನ್ ಮಹೇಶ್, ಪೆನೇಷಿಯಾ ಆಸ್ಪತ್ರೆ ಮುಖ್ಯಸ್ಥ ಡಾ.ಸಿ. ಜಯಣ್ಣ, ಹಿರಿಯ ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com