ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಜಿಂದಾಲ್ ಹಣ

Published On :
ಬೆಂಗಳೂರು: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿಯೇ ಒಂದು ಸಂಸ್ಥೆಯನ್ನು ಹುಟ್ಟುಹಾಕುವ ಬೆಂಗಳೂರು ವಿವಿ ಕಲ್ಪನೆ ಸಾಕಾರಗೊಳ್ಳುವ ಹಂತ ತಲುಪಿದೆ.
`ಸೀತಾರಾಮ್ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್' ಸಂಸ್ಥೆ ಆರಂಭಕ್ಕೆ ಇದ್ದ ಎಡರುತೊಡರು, ಗೊಂದಲಗಳನ್ನು ಬಗೆಹರಿಸಿಕೊಂಡಿರುವ ಬೆಂವಿವಿ, ಮಂಗಳವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಅಂತಿಮ ಒಪ್ಪಿಗೆ ಸೂಚಿಸಿದೆ.
ಸಿಂಡಿಕೇಟ್ ಸಭೆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಲಪತಿ ಪ್ರೋ.ತಿಮ್ಮೇಗೌಡ, ಈ ಸಂಸ್ಥೆಗೆ ಜಿಂದಾಲ್ ಸಂಸ್ಥೆ ಸಂಪೂರ್ಣ ಹಣ ನೀಡುತ್ತಿದೆ. ಅಂದಾಜು ರು.100-150 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಬೆಂವಿವಿಯು ಮೂರು ಎಕರೆ ಜಾಗ ಮಾತ್ರ ನೀಡುತ್ತಿದೆ. ಜಿಂದಾಲ್ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯ ಪಾತ್ರವಾಗಿ ಈ ಸಂಸ್ಥೆಯನ್ನು ರೂಪಿಸಲಿದೆ ಎಂದರು. ಮುಂದಿನ ದಿನಗಳಲ್ಲಿ ಈಗಿರುವ ಅರ್ಥಶಾಸ್ತ್ಪ ವಿಭಾಗದೊಂದಿಗೆ ಸೀತಾರಾಮ್ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಿಳಿತಗೊಳ್ಳುತ್ತದೆ. ಈ ಸಂಬಂಧ ಎಂಒಯು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಬೆಂವಿವಿ ಮತ್ತು ಜಿಂದಾಲ್ ಸಂಸ್ಥೆಯ ಪಾತ್ರಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹೊಸ ಸಂಸ್ಥೆ ವಿಶೇಷ:
- ಸಂಸ್ಥೆಯಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್ ಜೊತೆಗೆ ಎಂಎ ಎಕನಾಮಿಕ್ಸ್ ಕೋರ್ಸ್.
- ಐದು ವರ್ಷ ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪಿಸುವ ಗುರಿ. ಆದರೆ, ಅದರ ಅಧಿಕಾರ ವ್ಯಾಪ್ತಿ, ಆಡಳಿತ ವಿವಿ ಅಧೀನದಲ್ಲೇ ಇರುತ್ತದೆ.
- ಈಗ ಯಾವ ರೀತಿ ಶುಲ್ಕ ವ್ಯವಸ್ಥೆ ಇದೆಯೋ ಅದೇ ರೀತಿ ಇರುತ್ತದೆ. ವಿವಿಧ ಕೋರ್ಸುಗಳಿಗೆ ಅನುಸಾರವಾಗಿ ಸಾಮಾನ್ಯ ಶುಲ್ಕ, ಪೇಮೆಂಟ್ ಕೋಟಾ ಸೀಟುಗಳು ಇರುವುದು.
- ಎರಡು ನೂತನ ಹಾಸ್ಟೆಲ್‍ಗಳ ನಿರ್ಮಾಣವಾಗಲಿವೆ. 250 ಪ್ರವೇಶ ಮಿತಿಯ ಎರಡು ಹಾಸ್ಟೆಲ್‍ಗಳಿಗೆ ಅಗತ್ಯವಾದ ಸಲಕರಣೆಗಳನ್ನೂ ಜಿಂದಾಲ್ ಸಂಸ್ಥೆಯೇ ನೀಡುವುದು.
- ವಿದ್ಯಾರ್ಥಿಗಳ ಪ್ರವೇಶಕ್ಕೆ ಜಿಂದಾಲ್ ಪ್ರತಿನಿಧಿ ಒಳಗೊಂಡ ಒಂದು ಸಮಿತಿ ಇರುತ್ತದೆ. ಐವರು ವಿದ್ಯಾರ್ಥಿನಿ ಯರಿಗೆ ಜಿಂದಾಲ್ ಪ್ರವೇಶ ನೀಡುತ್ತದೆ.
- ಈ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರಧಾನ ಆದ್ಯತೆ ಇರಬೇಕೆಂಬುದು ಜಿಂದಾಲ್ ಸಂಸ್ಥೆಯ ಆಶಯ.
ಯಾರ ಪಾತ್ರ ಏನು?:
-ಕಾಲೇಜು ಕಟ್ಟಡ, ಹಾಸ್ಟೆಲ್ ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಜಿಂದಾಲ್‍ನದ್ದು. ಇಲ್ಲಿಗೆ ಅಗತ್ಯವಾದ ಪಠ್ಯ ಮತ್ತು ಪಠ್ಯೇತರ ಸಲಕರಣೆ ಗಳನ್ನು ಸಂಸ್ಥೆಯೇ ನೀಡುವುದು.
- ಬೆಂವಿವಿ ಈ ಸಂಸ್ಥೆಗೆ ಬೇಕಾದ ಮೂರು ಎಕರೆಯಷ್ಟು ಜಾಗವನ್ನು ನಿಗದಿ ಮಾಡಲಿದೆ. ಇಲ್ಲಿ ಯಾವ ರೀತಿ ಕಟ್ಟಡ ನಿರ್ಮಾಣವಾಗಬೇಕೆಂದು ರೂಪುರೇಷೆ ಯನ್ನು ಬೆಂಗಳೂರು ವಿವಿಯೇ ಸಿದ್ಧಪಡಿಸಿಕೊಡಲಿದೆ.
ಹೊಸ ಸಂಸ್ಥೆ ವಿವಿಗೆ ಬೂಸ್ಟ್
ಒಂದು ಅತ್ಯುಚ್ಛ ಮಟ್ಟದ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಕಟ್ಟಲು ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಈ ಯೋಜನೆಯಲ್ಲಿ ಜಿಂದಾಲ್ ಸಂಸ್ಥೆ ಸುಮಾರು ರು.100-150 ಕೋಟಿಯನ್ನು ಬಳಸುತ್ತಿದೆ. ಹೆಸರಷ್ಟೇ ಅವರದ್ದು, ಉಳಿದಂತೆ ಆಡಳಿತ ನಿರ್ವಹಣೆ ವಿವಿ ವ್ಯಾಪ್ತಿಯಲ್ಲೇ ಇರುತ್ತದೆ. ಹೀಗಾಗಿ ಯಾವುದೇ ಗೊಂದಲಗಳಿರುವುದಿಲ್ಲ ಎಂದು ಕುಲಪತಿ ಪ್ರೊ.ತಿಮ್ಮೇಗೌಡ ಸ್ಪಷ್ಟಪಡಿಸುತ್ತಾರೆ. ಈಗಿರುವ ಆರ್ಥಿಕ ಇತಿಮಿತಿಯಲ್ಲಿ ಇರುವ ವ್ಯವಸ್ಥೆಯನ್ನು ತೂಗುವುದೇ ಕಷ್ಟಕರ. ಹೀಗಿರುವಾಗ ಇಂತಹದೊಂದು ದೊಡ್ಡ ಸಂಸ್ಥೆ ರೂಪುಗೊಂಡರೆ ಅದರ ಲಾಭ ವಿದ್ಯಾರ್ಥಿಗಳಿಗೇ ಹೊರತು ಬೇರೇನೂ ಇಲ್ಲ. ಒಂದು ವೇಳೆ ಈಗಿರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋದಲ್ಲಿ ಮುಂದೊಂದು ದಿನ ನಮ್ಮ ಸಂಸ್ಥೆಗಳಿಂದ ವಿದ್ಯಾರ್ಥಿಗಳು ದೂರಾಗುವ ಸಂದರ್ಭಗಳೇ ಹೆಚ್ಚು. ಖಾಸಗಿ ವಿವಿಗಳು ಬರುತ್ತಿರುವಾಗ ಉನ್ನತ ಮಟ್ಟದ ವ್ಯವಸ್ಥೆಗಳು ಅಲ್ಲಿದ್ದರೆ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಾರೆ ವಿನಃ ನಮ್ಮಲ್ಲಿಗೆ ಬರುವುದಿಲ್ಲ ಎಂದವರು ವಿವರಿಸುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಇತಿಮಿತಿಗಳ ನಡುವೆಯೇ ಈ ಸಂಸ್ಥೆಗೆ ಪ್ರವೇಶ ಇರುವ ಕಾರಣ ಮುಂದೆ ಏನೋ ಆಗಿಬಿಡುತ್ತದೆ ಎಂಬುದೆಲ್ಲಾ ಊಹಾಪೋಹ. ವಿವಿಯ ಒಂದಿಂಚು ಜಾಗವನ್ನೂ ಯಾರಿಗೂ ಕೊಡುತ್ತಿಲ್ಲ. ಅಲ್ಲದೇ ಈ ಸಂಸ್ಥೆ ನಿರ್ಮಾಣವಾಗುವುದರಿಂದ ವಿವಿಗೆ ಉತ್ತೇಜನ ಸಿಕ್ಕಂತೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


