"ಕಳಸಾ-ಬಂಡೂರಿ" ತಡೆಗೋಡೆ ಒಡೆದೇ ತೀರುತ್ತೇವೆ: ವಾಟಾಳ್ ನಾಗರಾಜ್

ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಣಕುಂಬಿಯಲ್ಲಿರುವ ತಡೆಗೋಡೆಯನ್ನು ಒಡೆದು ಬೀಳಿಸುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ...
ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ (ಸಂಗ್ರಹ ಚಿತ್ರ)
ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ (ಸಂಗ್ರಹ ಚಿತ್ರ)
Updated on: 

ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಣಕುಂಬಿಯಲ್ಲಿರುವ ತಡೆಗೋಡೆಯನ್ನು ಒಡೆದು ಬೀಳಿಸುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ  ಮುಖಂಡ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನವಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಕಣಕುಂಬಿಯಲ್ಲಿನ ತಡೆಗೋಡೆ ಬೀಳಿಸುವ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ನಿಷೇಧಾಜ್ಞೆ ಜಾರಿ ಮಾಡಿದರೂ ಪರವಾಗಿಲ್ಲ. ಗೋಡೆ ಒಡೆದೇ ತೀರುತ್ತೇವೆ ಎಂದು ಹೇಳಿದರು.

ಸರ್ಕಾರ ಬೇಕಾದರೆ ನಮ್ಮನ್ನು ಜೈಲಿಗೆ ಹಾಕಲಿ, ನಮ್ಮ ಹೋರಾಟ ಕುಡಿಯುವ ನೀರಿಗಾಗಿಯೇ ವಿನಃ ನ್ಯಾಯಾಲಯದ ವಿರುದ್ಧ ಅಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತೇವೆ ಎಂದರು. ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಯಾವ ತ್ಯಾಗಕ್ಕೂ ನಾವು ಸಿದ್ಧ. ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ.  ಅಲ್ಲಿಂದಲೇ ಹೋರಾಟ ಮಾಡುತ್ತೇವೆ. ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದರು.

ಸದಾಕಾಲ ನೀರಿಗಾಗಿ ಹಾಹಾಕಾರ ಏರ್ಪಡುವ ಉತ್ತರ-ಕರ್ನಾಟಕದ ಜಿಲ್ಲೆಗಳಿಗೆ ನೀರು ಕೊಡಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದ್ದ ಕಳಸಾ-ಬಂಡೂರಿ ನಾಲಾ ಯೋಜನೆ ನ್ಯಾಯಾಲದ  ಆದೇಶದಿಂದಾಗಿ ನೆನೆಗುದಿಗೆ ಬಿದ್ದಿದೆ. ಇದೀಗ ನ್ಯಾಯಾಲಯದ ಆದೇಶದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೈತರ ಪ್ರತಿಭಟನೆ ಇದೀಗ ತಾರಕ್ಕೇರಿದೆ. ಇನ್ನು ರೈತರ  ಪ್ರತಿಭಟನೆಗೆ ಕನ್ನಡ ಚಿತ್ರರಂಗ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದ್ದು, ಕಣಕುಂಬಿಯಲ್ಲಿ ನಾಲೆಗೆ ನಿರ್ಮಿಸಲಾಗಿರುವ ತಡೆಗೋಡೆಯನ್ನೂ ಕೂಡ ಒಡೆಯಲು ಸಂಘಟನೆಗಳು ಮುಂದಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com