

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ಮಾಡುವಾಗ ರೈತರಿಗಲ್ಲದವರಿಗೆ ಭೂಮಿ ಸಿಗಬಾರ ದು ಎಂಬ ಉದ್ದೇಶ ಇತ್ತು. ಆದರೆ, ದೇವೇಗೌಡರ ಕಾಲದಲ್ಲಿ ಆ ನಿಯಮ ಸಡಿಲವಾಯಿತು. ಇದರಿಂದಾಗಿ ಈಗ ರು.25 ಲಕ್ಷ ಆದಾಯ ಹೊಂದಿರುವವರೂ ಕೃಷಿ ಭೂಮಿ ಕೊಳ್ಳಬಹುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆರೋಪಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಇನ್ ಫ್ಯಾಕ್ಟ್ ಫಿಲಂಸ್ ನಿರ್ಮಾಣದ `ಧರೆ ಹೊತ್ತಿ ಉರಿದೊಡೆ' ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರತಿಬಿಂಬಿಸುವ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡ ದ ಅವರು, ಈ ನಿಯಮದ ಸಡಿಲಿಕೆಯಿಂ ದಾಗಿ ದುಡ್ಡಿಟ್ಟುಕೊಂಡು ನೆಂಟರಿ- ಷ್ಟರೆಲ್ಲ ಭೂಮಿ ಖರೀದಿಸಲು ಕಾಯುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಟ್ಟಂತಾಯಿತು. ಇಂತಹವರಿಗೆ ಅವಕಾಶ ಮಾಡಿಕೊಟ್ಟರೆ ಭೂಮಿ ಉಳಿದೀತೆ ಎಂದು ಪ್ರಶ್ನಿಸಿದರು. ಅಲ್ಲದೆ, ಈ ನಿಯಮ ತಿದ್ದುಪಡಿ ಮಾಡುವಾಗ ಒಂದೇ ಒಂದು ಚರ್ಚೆ ನಡೆಯಲಿಲ್ಲ. ಯಾರೂ ದನಿ ಎತ್ತಲಿಲ್ಲ, ಎಲ್ಲರ ನಾಲಿಗೆ ಬಿದ್ದು ಹೋಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿಕರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂದಾದರೆ ಎಲ್ಲ ಕೃಷಿಕರು ಒಗ್ಗಟ್ಟಾಗಬೇಕು, ರಾಷ್ಟ್ರದಲ್ಲೇ ಕೃಷಿಕರೆಲ್ಲ ಒಂದೇ ವೇದಿಕೆಯಡಿ
ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಒಂದು ಬೆಳೆಗೆ ಬೆಲೆ ಬಂದಾಗ ಮತ್ತೊಬ್ಬರ ಬಗ್ಗೆ ಧ್ವನಿ ಎತ್ತಲ್ಲ. ಅಡಿಕೆ ಬೆಳೆಗಾರರಿಗೆ ಬೆಲೆ ಬಂದಿದೆ ಎಂದು ಅವರು ಇತರೆ ಬೆಳೆಗಾರರ ಬಗ್ಗೆ ಆಲೋಚಿಸುವುದೇ ಇಲ್ಲ.
ಎಲ್ಲ ರೀತಿಯ ಬೆಳೆಗಾರರು ಒಟ್ಟಾದಾಗ ದೇಶದ ಕೃಷಿಗೊಂದು ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ರಾಷ್ಟ್ರಮಟ್ಟದ ನಾಯಕತ್ವಬೇಕಾಗಿದೆ. ಆದರೆ ಅಂತಹ ನಾಯಕರು ಕಾಣುತ್ತಿಲ್ಲ, ಇದ್ದವರು ಸತ್ತುಹೋದರು ಎಂದರು. ರಾಜ್ಯದಲ್ಲಿ ಕೃಷಿ ಬೆಲೆ ಆಯೋಗ ಮಾಡಿದ್ದಾರೆ. ಅವರು ಮಾತನಾಡೋದೇ ಬೇರೆ ರೀತಿಯಾಗಿ ಎಂದು ಛೇಡಿಸಿದ ಅವರು, ಸಮಾನತೆ ಅನ್ನೊದೆಲ್ಲ ಬುರುಡೆ, ಅದು ಸಾಧ್ಯವಾಗುವು ದಿಲ್ಲ. ಸಾಮಾಜಿಕ ಆರ್ಥಿಕ ಸಮಾನತೆ ಈ ದೇಶದಲ್ಲಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಬ್ಬು ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸಿದ ಕಾಗೋಡು ತಿಮ್ಮಪ್ಪ, ರಾಜ್ಯದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುನ್ನಡೆಸುವ ಘಟಾನುಘಟಿ ಷೇರುದಾರರಿಗೆ ಎದುರಾಗಿರುವ
ಸಮಸ್ಯೆಗಳನ್ನು ಎದುರಿಸಲು ಸಾಧ್ಯವಿಲ್ಲವೇ? ಮುಖ ನೋಡಿದ್ರೆ ಪಳ ಪಳ ಹೊಳೆಯುತ್ತದೆ ಎಂದು ಟೀಕಿಸಿದರು. ಮಗ್ಗ, ಕೈ ಎರಡೂ ಗೊತ್ತಿಲ್ಲದವರಿಗೆ ಕೈಮಗ್ಗದ ಮುಂದಾಳತ್ವ ನೀಡಲಾಗುತ್ತದೆ. ದೇಸಿ ಮೂಲಕ ಕೈಮಗ್ಗ ಉದ್ಯಮವನ್ನು ಸುಸ್ಥಿರಗೊಳಿಸಿದ ಪ್ರಸನ್ನರಂತವರಿಗೆ ನಿಗಮದ ಅಧಿಕಾರ ಕೊಟ್ಟಾಗ ಕೈಮಗ್ಗ ಕ್ಷೇತ್ರ ಸುಧಾರಣೆ ಸಾಧ್ಯವಿದೆ ಎಂದು ವ್ಯವಸ್ಥೆಯನ್ನು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಉಪಸ್ಥಿತರಿದ್ದರು. ಸಾಕ್ಷ್ಯಚಿತ್ರ ಸಿದ್ಧಪಡಿಸಿದ ಮಾಯಾ ಜೈದೀಪ್ ಮತ್ತು ಕೆಸ್ತೂರು ವಾಸುಕಿಯವರು ಹಾಜರಿದ್ದರು.
ಹೇಳಿಕೆಗೆ ಜೆಡಿಎಸ್ ವಿರೋಧ
ವಿಧಾನಸಭಾಪತಿ ಕಾಗೋಡು ತಿಮ್ಮಪ್ಪ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ರಾಜಕೀಯ ಹೇಳಿಕೆ ನೀಡುವ ಮುನ್ನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ. ದೇವೇಗೌಡರು ಭೂ ಸುಧಾರಣೆ ಕಾಯ್ದೆಗೆ ತಂದ ತಿದ್ದುಪಡಿಯಿಂದ ಕಾಯ್ದೆ ಸಡಿಲವಾಯಿತು ಎನ್ನುವ ಕಾಗೋಡು ತಿಮ್ಮಪ್ಪ ಹೇಳಿಕೆಯನ್ನು ಖಂಡಿಸಿದ್ದಾರೆ. ದೇವೇಗೌಡರ ಹೆಸರನ್ನು ತಳಕು ಹಾಕುವ ಪ್ರಯತ್ನ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ತಮ್ಮ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ, ಒಂದು ಪಕ್ಷದ ನಾಯಕರಾಗಿ ರಾಜಕೀಯ ಹೇಳಿಕೆ ನೀಡಿದ್ದರೆ, ಅದಕ್ಕೆ ಸರಿಯಾದ ಉತ್ತರ ನೀಡಲು ಜೆಡಿಎಸ್ ಸಿದ್ಧವಿದೆ ಎಂದರು.