

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳಾದ ನರಸಿಂಹ ರಾವ್, ರಾಜಶೇಖರ್, ಸಾದಿಕ್ ಅವರ ನ್ಯಾಯಾಂಗ ಬಂಧನವನ್ನು ಸೆ. 15ರವರೆಗೆ ವಿಸ್ತರಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.ಈ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ಪೊಲೀಸರು ಬುಧವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈ ವೇಳೆ ಪ್ರಕರಣ ಪರಿಶೀಲಿಸಿದ ನ್ಯಾಯಾಲಯ, ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ತನಿಖೆ ಇನ್ನೂ ನಡೆಯುತ್ತಿದ್ದು, ಮುಂದುವರೆಸಬೇಕಿದೆ. ಹಾಗಾಗಿ ಆರೋಪಿಗಳಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆರೋಪಿಗಳ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ಮಾಡಿದ ಮನವಿಯನ್ನು ತಳ್ಳಿಹಾಕಿತು. ಜಾಮೀನು ಅರ್ಜಿಗೆ ಯಾವುದೇ ರೀತಿಯ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸುವಂತೆ ಎಸ್ ಐಟಿ ಪರ ವಿಶೇಷ ಅಭಿಯೋಜಕರಿಗೆ ನ್ಯಾಯಾಲಯ ನಿರ್ದೇಶಿಸಿತು.
ಪ್ರಕರಣದ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿತು.