

ಬೆಂಗಳೂರು: ಬೀದರ್ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕೈಗೊಳ್ಳಲಾಗಿರುವ ಬರಪರಿಹಾರ ಕಾಮಗಾರಿಗಳ ಬಗ್ಗೆ ಸರ್ಕಾರ ಮುಂದಿನ ಮೂರು ತಿಂಗಳಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ರಾಜ್ಯ ಸರ್ಕಾರ ಕಳೆದ ವರ್ಷ ನವೆಂಬರ್ ತಿಂಗಳ 20ರಂದು ಬೀದರ್, ಔರಾದ್, ಭಾಲ್ಕಿ, ಬಸವಕಲ್ಯಾಣ ಮತ್ತು ಹುಮನಾಬಾದ್‍ಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಿದೆ. ಆದರೆ, ಈತನಕ ಯಾವುದೇ ಬರಪರಿಹಾರ ಕಾಮಗಾರಿಗಳು ಸರ್ಕಾರದವತಿಯಿಂದ ಚಾಲನೆ ದೊರೆತಿಲ್ಲ ಎಂದು ಆರೋಪಿಸಿ ಔರಾದ್ ತಾಲ್ಲೂಕಿನ ಕೃಷಿಕ ಗುರುನಾಥ ವಡ್ಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಸ್.ಕೆ.ಮುಖರ್ಜಿ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ಕುರಿತು ಅರ್ಜಿದಾರರು ಬೀದರ್ ಜಿಲ್ಲಾ„ಕಾರಿಗೆ ಹೊಸ ಮನವಿ ಸಲ್ಲಿಸಬೇಕು. ಈ ಮನವಿಯನ್ನು ಜಿಲ್ಲಾಧಿಕಾರಿಗಳು ಹದಿನೈದು ದಿನಗಳಲ್ಲಿ ಪರಿಗಣಿಸಬೇಕು' ಎಂದು ಆದೇಶಿಸಿತು. ಜಿಲ್ಲೆಯ ವಿವಿಧೆಡೆ ಕೊಳವೆ ಬಾವಿಗಳು ವಿಫಲವಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.ಮಾತ್ರವಲ್ಲದೇ ಜಾನುವಾರುಗಳೂ ಸಹ ಇದರಿಂದ ತೊಂದರೆ ಅನುಭವಿಸುತ್ತಿರುವುದಾಗಿ ಅರ್ಜಿಯಲ್ಲಿ ದೂರಲಾಗಿತ್ತು.