ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಗೋಡೆ ಕುಸಿದು ಮೃತಪಟ್ಟ ಕಾರ್ಮಿಕರ ಸಂಖ್ಯೆ 5ಕ್ಕೇರಿದೆ. ಭಾನುವಾರ ರಾತ್ರಿ ಮೂವರು ಮೃತಪಟ್ಟಿದ್ದರೆ, ಸೋಮವಾರ ಬೆಳಗ್ಗೆ ಜಾರ್ಖಂಡ್ ಮೂಲದ ಪಾಪನ್ ಮಂಡಲ್ (21) ಮತ್ತು ಮಿಥುನ್ ಸರ್ದಾರ್ ಎಂಬುವರು ಮೃತಪಟ್ಟಿದ್ದಾರೆ.
ಕಾರ್ಮಿಕರು ವಾಸವಾಗಿದ್ದ ಶೆಡ್ ಮೇಲೆ ಕಾಪೌಂಡ್ ಗೋಡೆ ಕುಸಿದು ಗಾಯಗೊಂಡಿದ್ದ ಕಾರ್ಮಿಕರನ್ನು ಚಿಕಿತ್ಸೆಗಾಗಿ ಭಾನುವಾರ ರಾತ್ರಿ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮಳೆ ದುರಂತ ಐವರು ಕಾರ್ಮಿಕರನ್ನು ಬಲಿ ತೆಗೆದುಕೊಂಡಂತಾಗಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು,ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.ಸದ್ಯ ಕಟ್ಟಡ
ಕಾಮಗಾರಿ ಸ್ಥಗಿತಗೊಂಡಿದೆ.
ದೂರು: ಕಟ್ಟಡ ಕಾಮಗಾರಿಗೆ ಆಗಮಿಸಿದ್ದ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಆರ್ ಆರ್ ಸಿಗ್ನೇಚರ್ ಕಂಪೆನಿ, ಗುತ್ತಿಗೆದಾರರು, ಮಾಲೀಕರು, ಸೈಟ್ ಎಂಜಿನಿಯರ್, ಮೇಲ್ವಿಚಾರಕರ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಾರ್ಟ್‍ಮೆಂಟ್ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಕಾರ್ಮಿಕರ ಮರಣೋತ್ತರ ಪರೀಕ್ಷೆ ಸೇರಿದಂತೆ ನಿರಾಶ್ರಿತರಾಗಿರುವ ಕಾರ್ಮಿಕರಿಗೆ ಸೂರು ಕಲ್ಪಿಸುವುದು ಹಾಗೂ ಇತರೆ ಸೌಲಭ್ಯ
ಒದಗಿಸುವಲ್ಲಿ ನಿರತರಾಗಿದ್ದಾರೆ. ಹಾಗಾಗಿ ವಿಚಾರಣೆ ನಡೆಸಿ ನಂತರ ಆರೋಪಿಗಳನ್ನು ಬಂಧಿಸಲಾಗುವುದು. ಇನ್ನು ಮೃತರ ವಾರಸುದಾರರು ಆಗಮಿಸಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ,ವಾರಸುದಾರರಿಗೆ ಮೃತದೇಹಗಳನ್ನು
ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಮಳೆಯ ಅರ್ಭಟ
ನಗರದಲ್ಲಿ ಸೋಮವಾರ ಸಂಜೆಯೂ ವರುಣನ ಆರ್ಭಟ ಮುಂದುವರಿದಿದ್ದು, ಹಲವೆಡೆ ಮರಗಳು ಉರುಳಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಆದರೆ ಹೆಚ್ಚಿನ ಸ್ಥಳಗಳಲ್ಲಿ ಹಿಂದಿನ ದಿನದಂತೆ ಮಧ್ಯರಾತ್ರಿಯವರೆಗೂ ಮಳೆ ಸುರಿಯಲಿಲ್ಲ.ಈಜಿಪುರ, ಬುಲ್ ಟೆಂಪಲ್ ರಸ್ತೆ, ಗಾಳಿ ಆಂಜನೇಯ ರಸ್ತೆ, ಟ್ಯಾನರಿ ರಸ್ತೆ, ಶಿವಾನಂದ ವೃತ್ತದ ಬಳಿ, ಆಡುಗೋಡಿ ಸರ್ಕಲ್ ಬಳಿ ನೀರು ಹರಿದು ವಾಹನ ದಟ್ಟಣೆ ಉಂಟಾಯಿತು.ರಾಜಕಾಲುವೆಗಳು ತುಂಬಿ ಹರಿದಿದ್ದು, ಹಲವೆಡೆ ನೀರು ನುಗ್ಗಿದೆ.
ಹಾನಿ: ಸೋಮವಾರ ಸಂಜೆ 5 ರವರೆಗೆ ಬೆಸ್ಕಾಂ ಸಹಾಯವಾಣಿಗೆ ಕರೆಗಳ ಮಹಾಪೂರ ಹರಿದು ಬಂದಿದೆ. 9,306 ಕರೆಗಳ ಸ್ವೀಕೃತವಾಗಿ, 3,728 ದೂರು ದಾಖಲಾಗಿದೆ. 1,833ದೂರುಗಳನ್ನು ಕೂಡಲೇ ಪರಿಹರಿಸಲಾಗಿದೆ ಎಂದು ಬೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ. ಸಂಪಂಗಿರಾಮನಗರದ ಪಲ್ಲವಿ ಥಿಯೇಟರ್ ಬಸ್ ತಂಗುದಾಣ ಬಳಿ ಮರವೊಂದು ಬಿದ್ದಿದ್ದು,
ಕೂಡಲೇ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಸುಬ್ಬಯ್ಯನಪಾಳ್ಯದಲ್ಲಿ ನೀರು ನುಗ್ಗಿ ಮೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇಲ್ಲಿಯೂ ಬಿಬಿಎಂಪಿ ಸಿಬ್ಬಂದಿ ಸಲಕರಣೆಗಳ ಸಮೇತ ಭೇಟಿ ನೀಡಿ ಪರಿಹಾರ ಕಾರ್ಯ ನಡೆಸಿದ್ದಾರೆ.