

ಬೆಂಗಳೂರು: ಶಿಶು ಮರಣ ಪ್ರಮಾಣ ಕಡಿಮೆ ಹಾಗೂ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು, ಮಕ್ಕಳ ಸರಿಯಾದ ಬೆಳವಣಿಗೆಯ ಟ್ರ್ಯಾಕಿಂಗ್ ಮುಖಾಂತರ ಖಚಿತಪಡಿಸಿಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರವು `ವಾತ್ಸಲ್ಯ ವಾಣಿ- 104' ಯೋಜನೆ ಜಾರಿಗೆ ತಂದಿದೆ.
ಸೋಮವಾರ ವಿಧಾಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ನೂತನ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ಯು.ಟಿ.ಖಾದರ್, ವಾತ್ಸಲ್ಯ ವಾಣಿ ಯೋಜನೆಯಲ್ಲಿನ ವ್ಯವಸ್ಥೆಯು ಭಾರತದಲ್ಲೇ ಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿದೆ. ಈ ಸೇವೆಯಿಂದಾಗಿ ಗರ್ಭಿಣಿಯರ ಆರೈಕೆಗೆ ಮತ್ತು ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೇವೆಯನ್ನು ಕಡ್ಡಾಯವಾಗಿ ಒದಗಿಸುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣದ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದರು.
ಪ್ರತಿಯೊಬ್ಬ ಗರ್ಭಿಣಿಯ ನೋಂದಣಿ ಸಮಯದಿಂದ ಹೆರಿಗೆಯಾಗುವವರೆಗೂ, ಪ್ರಸವದ ನಂತರದ ಆರೈಕೆಯೂ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ನೋಂದಣಿಯಾಗಿದ್ದರೂ ಸಮಯೋಚಿತವಾಗಿ ಸಂಪೂರ್ಣ ಆರೋಗ್ಯ ಸೇವೆ ಒದಗಿಸುತ್ತದೆ ಎಂದು ವಿವರಿಸಿದರು. ಆರೈಕೆ ಮಾಹಿತಿಯ ಜೊತೆಗೆ ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಮಾಹಿತಿ, ಸರ್ಕಾರ ವಿವಿಧ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುವುದು, ಗಂಡಾಂತರ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರು, ಕಡಿಮೆ ತೂಕವುಳ್ಳ ಮಕ್ಕಳನ್ನು ಗುರುತಿಸುವುದು ಯೋಜನೆಯ ಪ್ರಮುಖ ಮುಖ್ಯಾಂಶಗಳು ಎಂದರು.
ಮಾತನಾಡಿದ ತಾರಾ ಅನುರಾಧ, ಆರೋಗ್ಯ ಸಚಿವರಿಗೆ, ಕೇಂದ್ರ ಸರ್ಕಾರಕ್ಕೆ ಸಭಿಕರಿಂದ ಜೈಕಾರ ಕೂಗಿಸಿದ್ದು ಮತ್ತು ಮಹಿಳೆಯರಿಗೆ ಮಾತ್ರ ಗರ್ಭಧರಿಸಲು ಅವಕಾಶ, ಗಂಡಸರಿಗಿಲ್ಲ ಅವಕಾಶ ಎಂಬಿತ್ಯಾದಿ ಮಾತುಗಳು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ ರಾದ ತಾರಾ ಅನುರಾಧ, ಜಯಮಾಲ, ಅತುಲ್ ಕುಮಾರ್ ತಿವಾರಿ, ವಿ.ಎಸ್. ವಸ್ತಾದ್, ಡಾ.ಜಿ.ಎಂ.ವಾಮದೇವ್ ಇದ್ದರು.