

ಶಿವಮೊಗ್ಗ: "ಕಾಂಗ್ರೆಸ್ ಗೆ ಮತ ಹಾಕಿದರೆ ಅದು ರೈತರ ಸಾವಿಗೆ ಕಾರಣವಾದಂತೆ, ಗೋಹತ್ಯೆ ಮಾಡಿದಂತೆ, ಅತ್ಯಾಚಾರಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ". ಹೀಗೆಂದು ಹೇಳಿದ್ದು ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣ ವಿಫಲವಾಗಿruva ಕಾಂಗ್ರೆಸ್ ಸರ್ಕಾರ ಇನ್ನೆಂದೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಆಡಳಿತ ನೀಡುತ್ತಿದ್ದಾರೆ. ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಅಲೆ ಉಂಟಾಗಿದೆ. ರಾಜ್ಯದ ಜನತೆ ಸರ್ಕಾರದ ಆಡಳಿತ ವೈಖರಿಯನ್ನು ಕಂಡು ಬೇಸತ್ತು ಹೋಗಿದ್ದು ಬಿಜೆಪಿ ಇದರ ಪ್ರಯೋಜನ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ರೈತರ ಆತ್ಮಹತ್ಯೆಯನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವೂ ನಾಚಿಕೆ ಇಲ್ಲ ಎಂದಿರುವ ಈಶ್ವರಪ್ಪ, ಮಹಿಳೆಯರಿಗೆ ಮಾತೃ ಸ್ಥಾನ ನೀಡಿರುವ ಬಿಜೆಪಿ ಅಧಿಕಾರದಲ್ಲಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತು. ಆದರೆ ಈಗಿನ ಸರ್ಕಾರ ಅದನ್ನು ಪಕ್ಕಕ್ಕೆ ಸರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.