

ಬೆಂಗಳೂರು: ಝಿಕಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಜನಸಾಮಾನ್ಯರು ಈ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು-ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯರ ತಂಡಗಳನ್ನು ನೇಮಿಸಿ, ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಪಾಸಣೆ ವೇಳೆ ಜ್ವರದ ಲಕ್ಷಣ ಕಂಡುಬಂದರೆ ಅಂಥವರಿಗೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಗರ್ಭಿಣಿಯರ ಮೇಲೆ ಈ ರೋಗ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಉಚಿತ ಸೊಳ್ಳೆ ಪರದೆ, ಔಷಧಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ವೈರಸ್ ಹರಡದಂತೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನಮ್ಮಲ್ಲಿ ಲ್ಯಾಬ್ ಗಳಿದ್ದರೂ ಅತ್ಯುತ್ತಮ ಗುಣಮಟ್ಟದ ಉಪಕರಣಗಳಿಲ್ಲ. ಝಿಕಾ ರೋಗಾಣು ಪತ್ತೆ ಹಚ್ಚುವಂಥಹ ಪ್ರಯೋಗಾಲಯಕ್ಕಾಗಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ವರದಿ ಆಧರಿಸಿ ದೇಶದ 10 ಕಡೆ ಪ್ರಯೋಗಾಲಯಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.