

ಬೆಂಗಳೂರು: ಮಹಾನಗರ ಪಾಲಿಕೆಯ ಕಸ ವಿಂಗಡಣೆ ಅಭಿಯಾನದ ಸ್ವಚ್ಛತಾ ರಾಯಭಾರಿಯಾಗಲು ನಟ ಪುನೀತ್ ರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ.
ಬೆಂಗಳೂರು ಮಹಾನಗರದ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಮುದ್ರಣ ಹಾಗೂ ವಿಡಿಯೋ ಜಾಹೀರಾತು, ಅಭಿಯಾನದಲ್ಲಿ ಸಂಭಾವನೆ ಪಡೆಯದೆ ಭಾಗವಹಿಸಲು ಪುನೀತ್ ರಾಜ್ ಕುಮಾರ್ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರಕ್ಕಾಗಿ ಮನೆಗಳಿಂದ ಹಸಿ ಹಾಗೂ ಒಣ ತ್ಯಾಜ್ಯ ಬೇರ್ಪಡಿಸಿ ಸಂಗ್ರಹಿಸಲು 2013ರಲ್ಲಿ ಆಯುಕ್ತ ರಜನೀಶ್ ಗೋಯಲ್ ಆದೇಶಿಸಿದ್ದರು. ಆದರೆ ನಿಯಮ ಪಾಲನೆ ಮಾಡುವಲ್ಲಿ ಸಾರ್ವಜನಿಕರು ಅಸಹಕಾರ ತೋರಿದ ಹಿನ್ನೆಲೆಯಲ್ಲಿ 2015ರ ಡಿಸೆಂಬರ್ ನಿಂದ ಮನೆಯಲ್ಲೇ ಕಸ ವಿಂಗಡಣೆ ಕಡ್ಡಾಯಗೊಳಿಸಿ, ಕಸ ವಿಂಗಡಣೆ ಕುರಿತು ಬೀದಿ ನಾಟಕ, ಅರಿವು ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ರಾಯಭಾರಿಯಾಗುವಂತೆ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಡಾ.ಯತೀಶ್ ಕುಮಾರ್ ಪುನೀತ್ ಅವರಲ್ಲಿ ಮನವಿ ಮಾಡಿದ್ದರು.