ಬೆಂಗಳೂರು: ಇತ್ತೀಚೆಗಷ್ಟೇ ವರ್ತೂರು ಸಮೀಪದ ವಿಬ್ ಗಯಾರ್ ಶಾಲೆ ಬಳಿ ಪ್ರತ್ಯಕ್ಷವಾಗಿ ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಭಾನುವಾರ ತಡರಾತ್ರಿ ಮತ್ತೆ ಬೋನಿನಿಂದ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.
ಕಳೆದ ಫೆಬ್ರುವರಿ 7ರಂದು ವಿಬ್ ಗಯಾರ್ ಶಾಲೆಗೆ ನುಗ್ಗಿದ ಈ ಚಿರತೆಯನ್ನು ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿತ್ತು. ಬಳಿಕ ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಬೋನಿನಲ್ಲಿಟ್ಟಿಡಲಾಗಿತ್ತು. ಆದರೆ ನಿನ್ನೆ ತಡರಾತ್ರಿ ಚಿರತೆ ತಪ್ಪಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೋನಿನಿಂದ ತಪ್ಪಿಸಿಕೊಂಡಿರುವ ಚಿರತೆಗಾಗಿ ಬನ್ನೇರುಘಟ್ಟ ವ್ಯಾಪ್ತಿಯ ಬೇಗಿಹಳ್ಳಿಕೊಪ್ಪ, ಭೈರನಹಳ್ಳಿ ಸುತ್ತಮುತ್ತ ಕಾಡಿನಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಆರು ತಂಡಗಳ 52 ಸಿಬ್ಬಂದಿಗಳಿಂದ ಬನ್ನೇರುಘಟ್ಟ ಸುತ್ತಮುತ್ತ ಕಾಡಿನಲ್ಲಿ ತೀವ್ರಗತಿಯಲ್ಲಿ ಶೋಧಕಾರ್ಯ ನಡೆಯುತ್ತಿದೆ ಎಂದು ಬಂಡೀಪುರ ಅರಣ್ಯಸಂರಕ್ಷಣಾಧಿಕಾರಿ ಬಿಬಿ ಮಲ್ಲೇಶ್ ಅವರು ತಿಳಿಸಿದ್ದಾರೆ.