

ಬೆಂಗಳೂರು: ಅತಿ ವೇಗದಲ್ಲಿ ಬೈಕ್ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಅವಲಹಳ್ಳಿ ನಿವಾಸಿ ಅತೀಸ್ ಸಾಗರ್ ಬಿನ್ನಿ(21) ಮೃತಪಟ್ಟವರು. ತಗಸಕುಪ್ಪೆ ನಿವಾಸಿ ದೀಪಕ್ ಪಟೇಲ್ (21) ಗಾಯಗೊಂಡವರು. ಡಿಪ್ಲೊಮೋ ವ್ಯಾಸಂಗ ಮಾಡಿರುವ ಇಬ್ಬರೂ ಸ್ನೇಹಿತರಾಗಿದ್ದು ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ನಿಮಿತ್ತ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಟಿಎಂ ಬೈಕ್‍ನಲ್ಲಿ ಮೈಸೂರು ರಸ್ತೆ ಮೂಲಕ ನಗರಕ್ಕೆ ಬರುವಾಗ ಕೆಂಗೇರಿ ಟಾಟಾ ಮೋಟಾರ್ಸ್ ಎದುರು ನಿಯಂತ್ರಣ ತಪ್ಪಿ ಬೈಕ್ ಮೋರಿಗೆ ಬಿದ್ದಿದೆ.
ಇದರಿಂದ ಚಾಲಕ ಅತೀಸ್ ಸಾಗರ್ ಬಿನ್ನಿ ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರ ದೀಪಕ್ ಪಟೇಲ್ ಬೆನ್ನು ಮೂಳೆಗೆ ಹಾನಿಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.