ಬೆಂಗಳೂರು: ನನ್ನ ಪತಿ ಮುಗ್ಧ, ಯಾವುದೇ ಉಗ್ರ ಸಂಘಟನೆಯೊಂದಿಗೆ ಅವರು ಸಂಪರ್ಕ ಹೊಂದಿಲ್ಲ. ಆದರೂ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಉಗ್ರ ಚಟುವಟಿಕೆ ಆರೋಪದಡಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟಿರುವ ಬೆಂಗಳೂರಿನ ಹೆಗಡೆ ನಗರದ ಸಾರಾಯಿಪಾಳ್ಯ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಮಹಮ್ಮದ್ ಅಫ್ಜಲ್ ಪತ್ನಿ ಬುಶ್ರಾ ತಬಸುಂ ಮಾಧ್ಯಮಗಳ ಎದುರು ಕಣ್ಣೀರಿಟ್ಟರು.
ಮುಂಜಾನೆ 3ರ ಸುಮಾರಿಗೆ ಯಾರೋ ಮನೆಯ ಬಾಗಿಲು ಬಡಿಯುತ್ತಿದ್ದರು. ಇದರಿಂದ ಪತಿ ಮತ್ತು ನಾನು ಎಚ್ಚರಗೊಂಡೆವು. ಪತಿ ಮನೆ ಬಾಗಿಲು ತೆರೆದರು, ಈ ವೇಳೆ ಏಕಾಏಕಿ ಇಬ್ಬರು ಮಹಿಳೆಯರು ಸೇರಿ 30ರಿಂದ 40 ಮಂದಿ ಮನೆ ಪ್ರವೇಶಿಸಿದರು. ಪ್ರಶ್ನಿಸುವುದಕ್ಕೂ ಸಮಯ ನೀಡದೆ ಅಫ್ಜಲ್ ಅವರ ಕೈಗೆ ಬೇಡಿ ತೊಡಿಸಿ ಹಣೆಗೆ ಗನ್ ಹಿಡಿದು ಶಸ್ತ್ರಾಸ್ತ್ರ ಎಲ್ಲಿಟ್ಟಿದ್ದೀಯಾ ಎಂದು ಪ್ರಶ್ನಿಸಿದರು. ಕೆಲವರು ನಾವು ದೆಹಲಿ ಪೊಲೀಸರು ಎಂದಷ್ಟೇ ಹೇಳಿದರು. ನನಗೂ ಗನ್ ತೋರಿಸಿ ಮೌನವಾಗಿರುವಂತೆ ಗದರಿಸಿದರು. ಆಗ ನಮಗೆ ದಿಕ್ಕೇ ತೋಚದಂತಾಯಿತು. ಅಷ್ಟರಲ್ಲಿ ಉಳಿದವರು ಇಡೀ ಮನೆ ಜಾಲಾಡಿದರು.
ಬೀರು, ಅಲ್ಮೆರಾದಲ್ಲಿದ್ದ ಕೆಲ ದಾಖಲೆಗಳು, ಪತಿಯ ಪಾಸ್ ಪೋರ್ಟ್, ಲ್ಯಾಪ್ ಟಾಪ್, ಮೊಬೈಲು, ಕುರಾನ್ ಸೇರಿದಂತೆ ಕೆಲ ಪುಸ್ತಕಗಳನ್ನು ವಶಪಡಿಸಿಕೊಂಡರು. ಅಂತೆಯೇ ನನ್ನ ಮೊಬೈಲು ಹಾಗೂ ಮಗುವಿಗೆ ಆಟವಾಡಲು ನೀಡಿದ್ದ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡರು. ಜತೆಗೆ ದ್ವಿಚಕ್ರ ವಾಹನ ಮತ್ತು ಕಾರಿನ ಕೀಯನ್ನು ತೆಗೆದುಕೊಂಡರು. ತಕ್ಷಣ ಪತಿಯ ತಲೆಗೆ ಕಪ್ಪು ಬಣ್ಣದ ಮುಸುಕು ಹಾಕಿಕೊಂಡು ಕರೆದೊಯ್ದರು. ವಾಹನಗಳನ್ನೂ ತೆಗೆದುಕೊಂಡು ಹೋದರು ಎಂದು ಬಶ್ರಾ ದಾಳಿ ಕುರಿತು ವಿವರಿಸಿದರು. ದಾಳಿ ವೇಳೆ ಮನೆಯನ್ನು ಸಂಪೂರ್ಣವಾಗಿ ಶೋಧಿಸಿದ ಅಧಿಕಾರಿಗಳು ಕೈಗೆ ಸಿಕ್ಕಿದ ವಸ್ತುಗಳು, ದಾಖಲೆಗಳನ್ನು ವಶಕ್ಕೆ ಪಡೆದು ಇನ್ನೇನು ಪತಿಯನ್ನು ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಒಬ್ಬರು ತನ್ನ ಬಳಿ ಎರಡು ಪತ್ರಗಳನ್ನು ಹಿಡಿದು ಸಹಿ ಹಾಕಿಸಿಕೊಂಡರು.
ಪ್ರಾಜೆಕ್ಟ್ ಮ್ಯಾನೇಜರ್ : ಬಂಧಿತ ಮಹಮ್ಮದ್ ಅಫ್ಜಲ್ ನಗರದ ಕಾಲೆಜೊಂದರಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. ಕಳೆದ 9 ವರ್ಷಗಳಿಂದ ವೈಟ್ ಫೀಲ್ಡ್ ನಲ್ಲಿರುವ ಐಎಚ್ ಎಸ್ ಎಂಬ ಸಾಫ್ಟ್ ವೇರ್ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಖಾಸ್ಮಿಗೆ ಪರಿಚಿತ: ಅಫ್ಜಲ್ ಗೆ ಅರೆಬಿಕ್ ಭಾಷೆಯ ಕುರಾನ್ ಓದಬೇಕೆಂಬ ಆಸೆಯಿತ್ತು. ಅದಕ್ಕಾಗಿ ಅರೆಬಿಕ್ ಕಲಿಯಲು ಪ್ರಯತ್ನಿಸುತ್ತಿದ್ದರು. ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ನಗರದ ಮೌಲ್ವಿ ಅನ್ಜರ್ ಷಾ ಖಾಸ್ಮಿ ಅಫ್ಜಲ್ ಗೆ ಪರಿಚಯಿಸಿದ್ದರು. ಮೌಲ್ವಿ ಖಾಸ್ಮಿ ವಿದ್ವಾಂಸರಾಗಿದ್ದರಿಂದ ಅವರೊಂದಿಗೆ ಕುರಾನ್ ಕುರಿತು ಚರ್ಚಿಸುತ್ತಿದ್ದರು ಎಂದರು.