ಕಸಾಪ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜ. 25 ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಗಳು ನಡೆಯುತ್ತಲೇ ಇದೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಐದು ಹಾಗೂ ಬೆಂಗಳೂರು ನಗರ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಫೆ. 28 ರಂದು ನಡೆಯುವುದರಿಂದ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಮುಳುಗಿದ್ದಾರೆ. ಕೆಲವರು ಮತ ಯಾಚಿಸಲು ಮತಪತ್ರಗಳು, ವಿನೂತನ ರೀತಿಯ ಗುರುತಿನ ಪತ್ರಗಳು, ಕ್ಯಾಲೆಂಡರ್ ಹೀಗೆ ವಿವಿಧ ಪ್ರಚಾರದ ಸಾಮಾಗ್ರಿಗಳನ್ನು ಬಳಸುತ್ತಿದ್ದಾರೆ. ನಗರ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಇಬ್ಬರು ಒಕ್ಕಲಿಗ ಹಾಗೂ ಲಿಂಗಾಯತ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದ್ದು, ತಂತಮ್ಮ ಬಣಗಳ ನಾಯಕರನ್ನು ಒಗ್ಗೂಡಿಸಲು ಲಾಬಿ ನಡೆಯುತ್ತಿದೆ.