'ಗ್ರಾಮ'ದಿಂದ ನಗರಕ್ಕೆ ಶಿಫ್ಟ್ ಆದ ಚುನಾವಣೆ ಅಬ್ಬರ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ.29
ನಗರದೆಲ್ಲೆಡೆ ಚುನಾವಣಾ ಪ್ರಚಾರದ ಭರಾಟೆ ಸೋಮವಾರ ಜೋರಾಗಿತ್ತು. ಕಳೆದ ಕೆಲ ದಿನಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ನಗರದ ಜನರ ಓಲೈಕೆಯಲ್ಲಿ ನಿರತರಾಗಿದ್ದಾರೆ.
ಜೆ.ನರಸಿಂಹಸ್ವಾಮಿ ಪ್ರಚಾರ: ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಜೆ.ನರಸಿಂಹಸ್ವಾಮಿ ದೊಡ್ಡಬಳ್ಳಾಪುರ ನಗರದ ಪ್ರಮುಖ ಬಡಾವಣೆಗಳಲ್ಲಿ ಮತಯಾಚನೆಯಲ್ಲಿ ತೊಡಗಿದ್ದರು. ವಿವಿಧೆಡೆ ಚುನಾವಣಾ ಪ್ರಚಾರ ಭಾಷಣಗಳನ್ನು ಮಾಡಿದ ಅವರು ಕ್ಷೇತ್ರದಲ್ಲಿ ಪರಂಪರಾಗತವಾಗಿ ಉಳಿದುಕೊಂಡು ಬಂದಿರುವ ಸಭ್ಯ ರಾಜಕಾರಣ ಮತ್ತು ಅಭಿವೃದ್ಧಿ ಪರ ಹಿತಾಸಕ್ತಿಗಾಗಿ ಬಿಜೆಪಿ ಬೆಂಬಲಿಸಿ. ಕ್ಷೇತ್ರದಲ್ಲಿ ಈ ಬಾರಿ ವಲಸಿಗರ ಅಬ್ಬರ ಜೋರಾಗಿರುವುದು ಮತ್ತು ಕ್ಷೇತ್ರಕ್ಕೆ ಯಾವುದೇ ಕೊಡುಗೆ ಕೊಡದೆ ಕೇವಲ ಚುನಾವಣೆಗಷ್ಟೇ ಬರುವ ನಾಯಕರನ್ನು ತಿರಸ್ಕರಿಸುವ ಮೂಲಕ ಜನ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ ಎಂದರು.
ದೇವಾಂಗಪೇಟೆ, ಕೊಂಗಾಡಿಯಪ್ಪ ರಸ್ತೆ, ಶೇಣಿಗರಪೇಟೆ, ಎಲೆಪೇಟೆ, ವೈಶ್ಯರಬೀದಿ, ಚಿಕ್ಕಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು. ಸ್ಥಳೀಯ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.
ಚನ್ನಿಗಪ್ಪ ಅಬ್ಬರ: ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಚನ್ನಿಗಪ್ಪ ಕೂಡ ದೊಡ್ಡಬಳ್ಳಾಪುರ ನಗರದ ವೀರಭದ್ರನಪಾಳ್ಯ, ಕೊಂಗಾಡಿಯಪ್ಪ ಮುಖ್ಯರಸ್ತೆ, ನೇಯ್ಗೆ ಬೀದಿ, ತೂಬಗೆರೆಪೇಟೆ, ತೇರಿನಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸೋಮವಾರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹಲವೆಡೆ ಪ್ರಚಾರ ಭಾಷಣ ಮಾಡಿದ ಅವರು ಜೆಡಿಎಸ್ ಅಭಿವೃದ್ಧಿ ಹಿತಾಸಕ್ತಿಯನ್ನು ಬೆಳೆಸಿಕೊಂಡು ಬಂದ ಪಕ್ಷ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೊಟ್ಟ ಆಡಳಿತ ನಮಗೆ ಮಾದರಿ. ದೊಡ್ಡಬಳ್ಳಾಪುರದ ಸಮಗ್ರ ಅಭಿವೃದ್ಧಿಗೆ ರಾಜಕೀಯ ಬದಲಾವಣೆ ಮುಖ್ಯ. ಹೀಗಾಗಿ ಜನ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಸ್ಥಳೀಯ ನಗರಸಭಾ ಸದಸ್ಯರು, ತಾ.ಅಧ್ಯಕ್ಷ ಆರ್.ಗೋವಿಂದರಾಜು, ನಗರಾಧ್ಯಕ್ಷ ತ.ನ.ಪ್ರಭುದೇವ್ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ಗೆ ಜೈ: ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಕೂಡ ವೀರಭದ್ರನಪೇಟೆ, ನೇಯ್ಗೆಬೀದಿ ಸೇರಿದಂತೆ ಹಲವೆಡೆ ಚುನಾವಣಾ ಪ್ರಚಾರ ನಡೆಸಿದರು. ಮನೆಮನೆಗೆ ತೆರಳಿ ಮತಯಾಚಿಸಿದ ಅಭ್ಯರ್ಥಿ ಟಿ.ವೆಂಕಟರಮಣಯ್ಯ, ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೇವಲ ಭರವಸೆಗಳ ಮೂಲಕ ಜನರನ್ನು ವಂಚಿಸುತ್ತಿವೆ. ಸ್ಪಷ್ಟ ಮತ್ತು ಸುಭದ್ರ ಆಡಳಿತ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಪಕ್ಷಾಂತರಿಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸಿ ಎಂದರು. ಅದೇ ರೀತಿ ಮಹಿಳಾ ಘಟಕದ ನೇತೃತ್ವದಲ್ಲಿ ಮಹಿಳೆಯರು ಮನೆಮನೆಗಳಿಗೆ ತೆರಳಿ ಕಾಂಗ್ರೆಸ್ಗೆ ಮತ ನೀಡುವಂತೆ ಮನವಿ ಮಾಡಿದರು. ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

