ಬೆಂಗಳೂರು ಗ್ರಾಮಾಂತರ

ದೇವೇಗೌಡರಂತೆಯೇ ಜಯಿಸುವರೇ ಸೊಸೆ ಅನಿತಾ

Published On :

- ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಆ.2
ಹನ್ನೊಂದು ವರ್ಷದ ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೂ ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮರು ಚುನಾವಣೆಗೂ ಕಾರಣ ಬೇರೆಯದೇ. ಆದರೆ, ಚುನಾವಣೆಯ ಸಂದರ್ಭ ಮತ್ತು ಜಿದ್ದಾಜಿದ್ದಿನ ಸೆಣಸಾಟದ ಸ್ವರೂಪದಲ್ಲಿ ಸಾಮ್ಯತೆ ಇದೆ.
ಕ್ಷೇತ್ರ ಮರು ವಿಂಗಡಣೆಯಲ್ಲಿ ಕನಕಪುರವು ಸ್ವಲ್ಪ ಮಟ್ಟಿನ ಬದಲಾವಣೆಯೊಂದಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಅವತರಿಸಿದೆ. 1967ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರವು 12 ಬಾರಿ ಸಾರ್ವತ್ರಿಕ ಚುನಾವಣೆ ಮತ್ತು ಎರಡನೇ ಬಾರಿಗೆ ಮರು ಚುನಾವಣೆಯನ್ನು ಎದುರಿಸುತ್ತಿದೆ.  
2002ರಲ್ಲಿ ಆಗಿನ ಸಂಸದ ಎಂ.ವಿ.ಚಂದ್ರಶೇಖರಮೂರ್ತಿ ನಿಧನ ಕಾರಣದಿಂದ ಕ್ಷೇತ್ರಕ್ಕೆ ಮೊಟ್ಟ ಮೊದಲ ಮರು ಚುನಾವಣೆ ನಡೆದಿತ್ತು. ಆದರೆ, ಈಗ ವಿಧಾನಸಭೆಗೆ ಆರಿಸಿ ಬಂದಿರುವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ ರಾಜಿನಾಮೆ ಮರು ಚುನಾವಣೆಗೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರವೇ: ಆಗಿನ ಮತ್ತು ಈಗಿನ ಮರು ಚುನಾವಣೆ ಸಂದರ್ಭದಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದು ಕಾಕತಾಳೀಯ. 2002ರ ಮರು ಚುನಾವಣೆ ವೇಳೆ ಎಸ್.ಎಂ.ಕೃಷ್ಣ ರಾಜ್ಯದ ಚುಕ್ಕಾಣಿ ಹಿಡಿದು, ಕನಕಪುರ ಮರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಅಂತೆಯೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಚುನಾವಣೆಯನ್ನು ಅಗ್ನಿ ಪರೀಕ್ಷೆ ಎನ್ನುವಂತೆ ಸ್ವೀಕರಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿ, ಕೈವಶ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.  
ಕಡು ವೈರಿಗಳ ಕದನ: ಹಿಂದಿನ ಮರು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಹಣಾಹಣಿಯ ಹೋರಾಟ ನಡೆದಿತ್ತು. ಈಗ ಆ ಇಬ್ಬರು ನಾಯಕರ ಕುಟುಂಬ ಸದಸ್ಯರೇ ಸ್ಪರ್ಧಾ ಕಣಕ್ಕೆ ಇಳಿಯುತ್ತಿದ್ದಾರೆ. ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವುದು ನಿರ್ಧಾರವಾಗಿದ್ದರೆ, ಅವರ ಎದುರಾಳಿ ಆಗುತ್ತಿರುವವರು ಡಿ.ಕೆ.ಶಿವಕುಮಾರ್ ಅವರ ಖಾಸಾ ಸಹೋದರ ಡಿ.ಕೆ.ಸುರೇಶ್ ಎನ್ನುವುದು ಮತ್ತೊಂದು ವಿಶೇಷ.
ಅನಿವಾರ್ಯ ಸ್ಥಿತಿ: 1999ರಲ್ಲಿ ದೇವೇಗೌಡ ಸ್ವಕ್ಷೇತ್ರ ಹಾಸನದಲ್ಲಿ ಪರಾಭವಗೊಂಡು ರಾಜಕೀಯವಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಸ್ವತ: ದೇವೇಗೌಡ ಮತ್ತು ಜೆಡಿಎಸ್ ಪಾಲಿಗೆ 2002ರ ಗೆಲವು ತಿರುವು ನೀಡಿದ್ದು, ಇತಿಹಾಸದ ಪುಟ ಸೇರಿದೆ. ಕೇಂದ್ರದಲ್ಲಿ ತೃತೀಯ ರಂಗ ರಚನೆಯ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಾಲಿಗೆ ಈ ಚುನಾವಣೆ ಮಹತ್ವದ್ದಾಗಿದೆ. ಮಾವ ದೇವೇಗೌಡರಂತೆಯೇ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೂ ಹಿಂದಿನ ಚುನಾವಣೆ ಸೋಲು ಕಾರಣ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅವರು ಸೋಲನುಭವಿಸಿದ್ದಾರೆ.
ಗೌಡರ ಗದ್ದಲ: ಮರು ಚುನಾವಣೆ ನಡೆಯುತ್ತಿರುವ ಉಭಯ ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯದ್ದಾಗಿವೆ. ಒಕ್ಕಲಿಗ ಸಮುದಾಯದ ಇಬ್ಬರು ಪ್ರಮುಖ ನಾಯಕರ ನಡುವಿನ ಹೋರಾಟ ಎಂದೇ ಬಿಂಬಿತವಾಗಿರುವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ.
ಬೆಂಗಳೂರು ಗ್ರಾಮಾಂತರದಂತೆಯೇ ಮಂಡ್ಯ ಕೂಡ ರಾಜಕೀಯವೇ ಉಸಿರಾಗಿರುವ ಪ್ರದೇಶ. ಈ ಚುನಾವಣೆಯ ಫಲಿತಾಂಶವನ್ನು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗದಿದ್ದರೂ ಸಾಕಷ್ಟು ಮಹತ್ವ ಪಡೆದುಕೊಂಡಿರುವುದನ್ನು ಅಲ್ಲಗಳೆಯುವಂತಿಲ್ಲ.

ಅಧಿಕಾರಕ್ಕೆ ಅಡ್ಡಿಯಾದ ಕಳಂಕ
ಕಳಂಕಿತ ಎನ್ನುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಗಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠರು ಈಗ ಅದೇ ಶಿವಕುಮಾರ್ ಸಾಮರ್ಥ್ಯವನ್ನು ಬಳಸಿಕೊಳ್ಳಲೆಂದೇ ಅವರ ಸಹೋದರ ಡಿ.ಕೆ.ಸುರೇಶ್‌ಗೆ ಟಿಕೆಟ್ ನೀಡಿದ್ದಾರೆ.

ಒತ್ತಡಕ್ಕೆ ಮಣಿದ ಅನಿತಾ
ಚನ್ನಪಟ್ಟಣ ಸೋಲಿನ ಬೇಸರದಿಂದ ಇನ್ನೂ ಹೊರ ಬರದ ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಸಕ್ತ ಮರು ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಸುತಾರಾಂ ಇಷ್ಟವಿರಲಿಲ್ಲ. ಆದರೆ, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಸಮ್ಮತಿಸಿದ್ದಾರೆನ್ನಲಾಗಿದೆ. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಹಿತ ನಾಯಕರು ಸ್ಪರ್ಧೆಗಿಳಿಯಲು ನಿರಾಕರಿಸಿದ್ದರು. 2 ಬಾರಿ ನಡೆದ ಪಕ್ಷದ ಸಭೆಯಲ್ಲೂ ಅನಿತಾ ಅವರನ್ನೇ ಕಣಕ್ಕಿಳಿಸಬೇಕೆನ್ನುವ ಒತ್ತಾಯ ವ್ಯಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ದೇವೇಗೌಡ ಅವರು ಅನಿತಾ ಜತೆ ಚರ್ಚಿಸಿ, ಸ್ಪರ್ಧೆಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.