ಕರೆ ಮಾಡಿದ ಹುಡುಗಿ; ಕೊಲೆ ಮಾಡಿದ ಸೋದರ
ಕ.ಪ್ರ.ವಾರ್ತೆ ಬೆಂಗಳೂರು ಆ. 22
ಬುದ್ಧಿ ಮಾತು ಕೇಳದೆ, ಪ್ರೀತಿಯ ವ್ಯಾಮೋಹಕ್ಕೆ ಬಿದ್ದು ಪ್ರೀತ್ಸೇ ಪ್ರೀತ್ಸೇ.. ಎಂದು ಯುವತಿ ಹಿಂದೆ ಹೋಗಿ ಕೊಲೆಯಾದ ಕಥೆ ಇದು.
ಹೊಸೂರು ರಸ್ತೆ ಶಿಕ್ಷಕರ ಬಡಾವಣೆ ನಿವಾಸಿ ಶಿವಶಂಕರ್ ರೆಡ್ಡಿ (20) ಹತ್ಯೆಯಾದವರು. ರೆಡ್ಡಿ ಪ್ರೀತಿಸುತ್ತಿದ್ದ ಯುವತಿಯ ಸಹೋದರರು ಹಾಗೂ ಭಾವಿ ಪತಿಯಿಂದಲೇ ಹತ್ಯೆ ನಡೆದಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬುಧವಾರ ರಾತ್ರಿ ಕೊಲೆಯಾಗಿದ್ದು, ರೆಡ್ಡಿ ಪ್ರೀತಿಸುತ್ತಿದ್ದ ಯುವತಿ, ಆಕೆಯ ಸಹೋದರ, ವಿವಾಹವಾಗಬೇಕಿದ್ದ ಯುವಕ ಹಾಗೂ ಇತರರು ಸೇರಿ ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದರು.
ಅದೇ ರೀತಿ ಬುಧವಾರ ರಾತ್ರಿ ರೆಡ್ಡಿಯನ್ನು ಆಟೋದಲ್ಲಿ ಅಪಹರಿಸಿ ಹತ್ಯೆ ಮಾಡಿ ನಂತರ ಆತ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಮೃತದೇಹ ಎಸೆದು ಹೋಗಿದ್ದಾರೆ. ಈ ಸಂಬಂಧ ಎಚ್‌ಎಸ್‌ಆರ್ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.
ಏನಿದು ಘಟನೆ: ಪರಪ್ಪನ ಅಗ್ರಹಾರದ ನಿವಾಸಿ ಶಿವಶಂಕರ್ ರೆಡ್ಡಿ ಅವರು ಡೊಕೊಮೊ ಮೊಬೈಲ್ ಏಜೆನ್ಸಿಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರೆಡ್ಡಿ ನೇಹಾ (ಹೆಸರು ಬದಲಿಸಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಆಕೆಗೆ ಇದು ಇಷ್ಟವಿರಲಿಲ್ಲ. ಎಷ್ಟು ವಿರೋಧಿಸಿದರೂ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಯುವತಿ ಈ ವಿಷಯವನ್ನು ಮನೆಯಲ್ಲಿ ತಿಳಿಸಿದಳು. ಆಕೆಯ ಸಹೋದರ ಗಣೇಶ್ ಹಾಗೂ ಇತರರು ರೆಡ್ಡಿಗೆ ಕರೆ ಮಾಡಿ ಬುದ್ಧಿಮಾತು ಹೇಳಿದರು. ಆದರೂ ಅದನ್ನು ಕಿವಿಗೆ ಹಾಕಿಕೊಳ್ಳದ ರೆಡ್ಡಿ, ಯುವತಿಗೆ ಆಗಾಗ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಆತನ ಕಾಟ ತಡೆಯದ ಯುವತಿ ಮತ್ತೆ ಮನೆಯಲ್ಲಿ ವಿಷಯ ತಿಳಿಸಿದಳು. ಇದೇ ವೇಳೆ ದೂರದ ಸಂಬಂಧಿ ರಾಮಚಂದ್ರ ಎಂಬುವವರ ಜತೆ ಆಕೆಯ ವಿವಾಹ ನಿಶ್ಚಯವಾಗಿತ್ತು. ವಿವಾಹ ನಿಶ್ಚಯವಾಗಿರುವ ವಿಷಯ ತಿಳಿಸಿದರೂ ಆತ ಸುಮ್ಮನಾಗಲಿಲ್ಲ. ಹಾಗಾಗಿ ಆತನಿಗೆ ಪಾಠ ಕಲಿಸಬೇಕು ಎಂದು ಯುವತಿ ಹಾಗೂ ಆಕೆಯ ಕುಟುಂಬ ಸದಸ್ಯರು ನಿರ್ಧರಿಸಿದ್ದರು.
ಮಾತನಾಡುವ ನೆಪದಲ್ಲಿ ಕರೆ: ಈ ಬಗ್ಗೆ ದೂರು ದಾಖಲಿಸಿರುವ ಪ್ರಶಾಂತ್ ಹೀಗೆ ವಿವರಿಸಿದ್ದಾರೆ. ಬುಧವಾರ ರಾತ್ರಿ ರೆಡ್ಡಿಗೆ ಕರೆ ಮಾಡಿದ ಯುವತಿ ನಾನು ನಿನ್ನ ಜತೆ ಮಾತನಾಡಬೇಕು ಹಾಗಾಗಿ ಎಚ್‌ಎಸ್‌ಆರ್ ಬಡಾವಣೆ 4ನೇ ಹಂತದ ಜಕ್ಕಸಂದ್ರದ ಕೆಎಫ್‌ಸಿ ಬಳಿ ಬರುವಂತೆ ತಿಳಿಸಿದ್ದಳು. ಆಕೆಯ ಮಾತನ್ನು ನಂಬಿದ ರೆಡ್ಡಿ ಕೆಲಸ ಮುಗಿಸಿದ ನಂತರ ಪ್ರಿಯತಮೆ ನೋಡಲು ಹೋಗಬೇಕು ಎಂದಿದ್ದ. ನಂತರ ನಾವಿಬ್ಬರೂ ರಾತ್ರಿ ಸುಮಾರು ಏಳು ಗಂಟೆ ವೇಳೆಗೆ ಆಕೆ ಸೂಚಿಸಿದ ಸ್ಥಳಕ್ಕೆ ಹೋಗಿದ್ದೆವು. ಅವರಿಬ್ಬರು ಮಾತನಾಡುತ್ತಿದ್ದ ವೇಳೆ ನಾನು ದೂರದಲ್ಲಿ ನಿಂತಿದ್ದೆ. ಆಗ ಅಲ್ಲಿಗೆ ಬಂದ ಆಟೋವೊಂದರಲ್ಲಿ ರೆಡ್ಡಿ ಹಾಗೂ ಯುವತಿ ಅಲ್ಲಿಂದ ಹೊರಟುಹೋದರು. ಸ್ನೇಹಿತ ವಾಪಸ್ ಬರುತ್ತಾನೆ ಎಂದು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿಯೇ ಕಾಯುತ್ತ ನಿಂತಿದ್ದೆ. ಆದರೂ ಸ್ನೇಹಿತ ಹಿಂತಿರುಗಲಿಲ್ಲ. ಕೊನೆಗೆ ರೆಡ್ಡಿ ಕಚೇರಿಗೆ ಹೋಗಿರಬಹುದು ಎಂದು ಕಚೇರಿಗೆ ಹೋದೆ. ಆದರೆ ಆತ ಅಲ್ಲಿಯೂ ಇರಲಿಲ್ಲ.
ಕೆಲಹೊತ್ತಿನ ನಂತರ ಆಟೋದಲ್ಲಿ ಬಂದ ಕೆಲವರು ಆತನನ್ನು ಆಟೋ ದಿಂದ ಕೆಳಗೆ ಎಸೆದು ಹೋದರು. ಆತನ ಮೇಲೆ ಹಲ್ಲೆ ನಡೆದಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಿದೆವು. ಪರಿಶೀಲಿಸಿದ ವೈದ್ಯರು ರೆಡ್ಡಿ ಮೃತಪಟ್ಟಿರುವುದಾಗಿ ತಿಳಿಸಿದರು ಎಂದಿದ್ದಾರೆ. ಈ ಸಂಬಂಧ ಎಚ್‌ಎಸ್‌ಆರ್ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಧಿತರು: ರಾಮಚಂದ್ರ, ಗಣೇಶ್, ಕಿರಣ್, ಶಿವ ಬಂಧಿತರು. ಮತ್ತಿಬ್ಬರು ಪರಾರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

