ಬೆಂಗಳೂರು ಗ್ರಾಮಾಂತರ

ಹೊಟೇಲ್, ಡಾಬಾಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

Published On :

ಮಾಗಡಿ: ತಾಲೂಕಿನ ಬಹುತೇಕ ಹೊಟೇಲ್ ಮತ್ತು ಡಾಬಾ ಗಳಲ್ಲಿ ಸ್ವಚ್ಛತೆಯಲ್ಲದೆ ಪರಿಸರಕ್ಕೆ ಹಾನಿಯಾಗುತ್ತಿದೆ. ಗ್ರಾಹಕರಿಗೆ ಕಲಬೆರಕೆ ಎಣ್ಣೆ, ಕಲರ್ ಪೌಡರ್ ಆಹಾರ ಪೂರೈಕೆ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹಲವಾರು ದೂರುಗಳು ಬಂದಿದ್ದು, ಆರೋಗ್ಯ ಸುರಕ್ಷಾ ಅಧಿಕಾರಿಗಳು  ಹೊಟೇಲ್ ಮತ್ತು ಡಾಬಾಗಳಿಗೆ ಕೂಡಲೆ ಭೇಟಿ ನೀಡಿ ಗುಣಮಟ್ಟದ ಆಹಾರ ಪೂರೈಕೆಗೆ ತಿಳುವಳಿಕೆ ನೀಡಿ, ಅಗತ್ಯ ಕ್ರಮ ವಹಿಸಿರುವ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ತಾಲೂಕು ಪಂಚಾಯತಿ ಅಧ್ಯಕ್ಷ ಜಿ. ಕೃಷ್ಣ ಆರೋಗ್ಯ ಸುರಕ್ಷಾ ಅಧಿಕಾರಿ ಅನುಸೂಯಮ್ಮ ಅವರಿಗೆ ತಾಕೀತು ಮಾಡಿದರು.
ಅವರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆರೋಗ್ಯ ಸುರಕ್ಷಾ ಕಾಯ್ದೆಯಡಿ ಹೊಟೇಲ್ ಮತ್ತು ಡಾಬಾಗಳ ಅಡುಗೆ ಮನೆಗಳಲ್ಲಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಕಲಬೆರಕೆ ಆಹಾರ ಪೂರೈಕೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು  ಜಿ. ಕೃಷ್ಣ ಎಚ್ಚರಿಕೆ ನೀಡಿದರು.
ನಿರ್ವಹಣೆಯಿಲ್ಲದ ಹಾಸ್ಟೆಲ್‌ಗಳು:  ಬಿಸಿಎಂ  ಹಾಸ್ಟೆಲ್‌ಗಳಿಗೆ ಬರುವುದು ತೀರ ಬಡಮಕ್ಕಳು, ಹಾಸ್ಟೆಲ್ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿವೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ನೀಡಬೇಕಾದ  ಚಪಾತಿ,  ಪಲ್ಯ ಹಾಗೂ ಬಾಳೆಹಣ್ಣು ನೀಡರಲಿಲ್ಲ, ತಿಂಗಳಿಂದಲೂ ನೀಡಿಲ್ಲ ಎಂದು ಮಕ್ಕಳು ಕಣ್ಣೀರು ಹಾಕಿದ್ದು ನನಗೆ ತುಂಬಾ ನೋವಾಗಿದೆ ಎಂದು ಬಿಸಿಎಂ ಅಧಿಕಾರಿಯನ್ನು ಜಿ.ಕೃಷ್ಣ ತರಾಟೆಗೆ ತೆಗೆದುಕೊಂಡರು.
ವಾರ್ಡನ್‌ಗಳ ನಿರ್ಲಕ್ಷ್ಯದಿಂದ ಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ಸಂಬಂಧ ವಾರ್ಡನ್ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಜಿ. ಕೃಷ್ಣ ಸೂಚಿಸಿದರಲ್ಲದೆ ಕೇವಲ ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡುವುದು ಸರಿಯಲ್ಲ, ಜನಪ್ರತಿನಿಧಿಗಳಿಗೂ  ಹೆಚ್ಚು ಜವಾಬ್ದಾರಿಯಿದೆ. ಆಗಾಗ್ಗೆ ಬಡಮಕ್ಕಳು ಓದುತ್ತಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಎಚ್ಚರಿಸುವುದು ಅಗತ್ಯವಿದೆ ಎಂದರು.
ಕಡ್ಡಾಯ: ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿದ್ದ ಎಸ್.ಜೆ.ಆರ್.ವೈ ಯೋಜನೆ ರದ್ದಾಗಿದೆ. ಹೊಸದಾಗಿ ಎನ್.ಆರ್. ಎಲ್. ಎಂ ಯೋಜನೆ ಜಾರಿಗೆ ಬಂದಿದೆ. ತಾಲೂಕಿನಲ್ಲಿರುವ ಸುಮಾರು 2500 ಸ್ತ್ರೀಶಕ್ತಿ ಸಂಘಗಳ ಪುನಶ್ಚೇನಕ್ಕೆ ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಆಗ ಮಾತ್ರ ಯೋಜನೆಗಳನ್ನು ಪಡೆಯಲು ಅರ್ಹರಾಗುತ್ತೀರಿ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ ಸರ್ಕಾರದ ಯೋಜನೆಯನ್ನು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತಾಲೂಕಿನಾದ್ಯಂತ ಇರುವ ಸ್ತ್ರೀಶಕ್ತಿ ಸಂಘಗಳಿಗೆ ವಿಷಯ ಮುಟ್ಟಿಸುವಂತೆ ಅಧ್ಯಕ್ಷ ಕೃಷ್ಣ, ಸಿಡಿಪಿಓ ಕೆಂಪಣ್ಣ ಅವರಿಗೆ ಸೂಚಿಸಿದರದೆ ತಾಲೂಕಿನಲ್ಲಿರುವ ಅಂಗನವಾಡಿಗಳನ್ನು ಆಯಾ ಪಂಚಾಯ್ತಿಗಳಲ್ಲಿ ನೋಂದಾಯಿಸಿ ಖಾತೆ ಮಾಡಿಸುವಂತೆ ತಾಕೀತು ಮಾಡಿದರು.
ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ವಿಷಪೂರಿತ ಆಹಾರ ಪೂರೈಕೆ ಮಾಡಲಾಗುತ್ತಿದೆ. ತೂಕದಲ್ಲೂ ವ್ಯತ್ಯಾಸ ಮಾಡಲಾಗುತ್ತಿದೆ, ಕ್ಲೀನಿಂಗ್ ಹೆಸರಿನಲ್ಲಿ ಗೋಲ್‌ಮಾಲ್ ನಡೆದಿದ್ದು, ಪಂಚಾಯ್ತಿ ಹಣ ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸದಸ್ಯ ಜಿ.ವಿ. ರಾಮಣ್ಣ, ಪೊಲೀಸ್ ರಾಮಣ್ಣ ಸಭೆಯ ಗಮನ ಸೆಳೆದು ಕೂಡಲೆ ತನಿಖೆಗೆ ಒತ್ತಾಯಿಸಿದರು. ಕೂಡಲೆ ಸಮಿತಿಯೊಂದನ್ನು  ರಚಿಸಿ ತನಿಖೆ  ನಡೆಸುವಂತೆ ಸಭೆ ತೀರ್ಮಾನಿಸಿತು. ಕೃಷಿ, ತೋಟಗಾರಿಕೆ, ರೇಷ್ಮೆ ಆಹಾರ, ಪಶು ಪಾಲನಾ ಇಲಾಖೆ
ಬೆಸ್ಕಾಂ, ಜಿ.ಪಂ.ಜಲಾನಯನ, ಲೋಕೋಪಯೋಗಿ ಇಲಾಖೆ ಕುರಿತು ಚರ್ಚಿಸಲಾಯಿತು.  
ತಾ.ಪಂ. ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕಾಂತರಾಜು, ಸದಸ್ಯರಾದ ಬಿ.ಟಿ.ವೆಂಕಟೇಶ್, ಶಂಕರಪ್ಪ, ಸತ್ಯನಾರಾಯಣ, ಅನುಸೂಯಮ್ಮ ಕಾಂತರಾಜು, ತೇಜಸ್ವಿನಿ ಮುದ್ದಹನುಮೇಗೌಡ, ಅನಿಸಾಖಾನಂ, ಶಿವಮ್ಮ,ಚಂದ್ರಕಲಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.